ಉದಯವಾಹಿನಿ, ಮೇಲುಕೋಟೆ: ಐತಿಹಾಸಿಕ ಬಹ್ಮೋತ್ಸವಗಳಲ್ಲಿ ಪ್ರಮುಖವಾದ ಶ್ರೀ ಚೆಲುವನಾರಾಯಣ ಸ್ವಾಮಿಯವರ ವೈರಮುಡಿ ಕಿರೀಟಧಾರಣ ಮಹೋತ್ಸವ ಇದೇ 21ರಿಂದ ರಾತ್ರಿ 8ಗಂಟೆಗೆ ಆರಂಭವಾಗಲಿದೆ.
ಹತ್ತು ದಿನಗಳ ಬ್ರಹ್ಮೋತ್ಸವದಲ್ಲಿ ನಾಲ್ಕನೆ ತಿರುನಾಳ್ ದಿನವಾದ ಮಾ.21ರ ರಾತ್ರಿ ಶ್ರೀದೇವಿ, ಭೂದೇವಿ ಸಮೇತರಾಗಿ ಗರುಡಾರೂಢನಾದ ಚೆಲುವನಾರಾಯಣನ ವೈರಮುಡಿ ಉತ್ಸವ ರಾತ್ರಿ 8 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಆರಂಭವಾಗಲಿದೆ.
ತಡರಾತ್ರಿ ವೈರಮುಡಿ ಉತ್ಸವ ಮುಗಿದ ತಕ್ಷಣ ಸ್ವಾಮಿಗೆ ವಜ್ರ ಖಚಿತ ರಾಜಮುಡಿ ಉತ್ಸವ ನೆರವೇರಲಿದೆ. ಭಾರತದಲ್ಲಿ ಒಂದೇ ರಾತ್ರಿ ಎರಡು ವಜ್ರಖಚಿತ ಕಿರೀಟ ತೊಡಿಸುವ ಸಂಪ್ರದಾಯ ಮೇಲುಕೋಟೆಯಲ್ಲಿ ಮಾತ್ರ ಆಚರಣೆಯಲ್ಲಿದ್ದು ರಾಜ್ಯ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಬ್ರಹ್ಮೋತ್ಸವದ ಪ್ರಮುಖ ಉತ್ಸವಗಳು: ವೈರಮುಡಿ ಜಾತ್ರಾಮಹೋತ್ಸವ ಇಂದು ಅಂಕುರಾರ್ಪಣದೊಂದಿಗೆ ಆರಂಭವಾಗಿ ಮಾ. 28 ರ ಶೇರ್ತಿ ಸೇವೆಯವರೆಗೆ 13 ದಿನಗಳ ಕಾಲ ನಡೆಯಲಿದೆ. ಬ್ರಹ್ಮೋತ್ಸವದಲ್ಲಿ ಮಾ.24 ರ ಭಾನುವಾರ ನಡೆಯುವ ಮಹಾರಥೋತ್ಸವ 25 ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ 26 ರಂದು ಬೆಳಿಗ್ಗೆ 11 ಗಂಟೆಗೆ ತೀರ್ಥಸ್ನಾನ ಸಂಜೆ 5 ಗಂಟೆಗೆ ನಡೆಯುವ ಪಟ್ಟಾಭಿಷೇಕ ಮಹೋತ್ಸವಗಳು ಅತ್ಯಂತ ಪ್ರಮುಖ ಉತ್ಸವಗಳಾಗಿವೆ.
ನಾಳೆ ಸಂಜೆ 5 ಗಂಟೆಗೆ ಕಲ್ಯಾಣಿಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ ಮಾ.18 ರಂದು ಬೆಳಿಗ್ಗೆ 9 ಗಂಟೆಗೆ ದ್ವಜಾರೋಹಣ, 19 ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ 20 ರಂದು ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲೀ ಮಹೋತ್ಸವ 22 ರ ಪ್ರಹ್ಮಾದ ಪರಿಪಾಲನೋತ್ಸವ 23 ರಂದು ರಾತ್ರಿ ಗಜೇಂದ್ರಮೋಕ್ಷ ಉತ್ಸವ 27 ರಂದು ನಡೆಯುವ ಮಹಾಭಿಷೇಕ ಮಹೋತ್ಸವಗಳು ವಿಶೇಷ ಉತ್ಸವಗಳಾಗಿದೆ.
