ಉದಯವಾಹಿನಿ, ಮೈಸೂರು: ರಾಜ್ಯದಲ್ಲಿ ಈ ಕೆವೈಸಿ ಆಗದೇ ಇರುವ ಪಡಿತರ ಚೀಟಿದಾರರ ಈ ಕೆವೈಸಿಯನ್ನು ಆದಷ್ಟು ಬೇಗ ಮಾಡಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಕೆವೈಸಿ ಆಗದೇ ಇರುವ ಪಡಿತರ ದಾರರ ಈ ಕೆವೈಸಿ ಆದಷ್ಟು ಬೇಗ ಮಾಡಿಸಿ. ಈ ಕೆವೈಸಿ ಮಾಡಿಸದ ಸದಸ್ಯರ ಈ ಕೆವೈಸಿ ಮಾಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಈ ಕೆವೈಸಿ ಮಾಡಿಸದ ಸದಸ್ಯರಿಗೆ ಮುಂದಿನ ಒಂದು ತಿಂಗಳ ಅವಕಾಶ ನೀಡಿ, ಆಗಲೂ ಈ ಕೆವೈಸಿ ಮಾಡಿಸದೆ ಇದ್ದರೆ ಅಂತಹ ಸದಸ್ಯರ ಪಡಿತರ ನಿಲ್ಲಿಸುವುದಾಗಿ ಕಾರ್ಡ್‌ದಾರರಿಗೆ ಎಚ್ಚರಿಕೆ ನೀಡಬೇಕು. ಅನಗತ್ಯವಾಗಿ ಕಾರ್ಡ್‌ಗಳು ವಿತರಣೆ ಆದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಬೇಕಿರುವ ವಾಹನ ಸೌಲಭ್ಯ ಹಾಗೂ ಕಾನೂನು ಮಾಪನ ನಿರೀಕ್ಷಕರ ಹ್ದುೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಆಹಾರ ಧಾನ್ಯಗಳು ಗೋದಾಮುಗಳಲ್ಲಿ ಹಾಳಾಗದಂತೆ ನೋಡಿಕೊಳ್ಳಿ. ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸುವ ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಬೇಕು ಎಂದು ಸೂಚನೆ ನೀಡಿದರು.
