ಉದಯವಾಹಿನಿ, ಬೆಂಗಳೂರು: ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್ ಮಟ್ಟದಲ್ಲಿ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಅನರ್ಹ ಫಲಾನುಭವಿಗಳನ್ನು ತೆಗೆದು ಹಾಕುವ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಯಿತು. ಆ ಮೂಲಕ ಪಂಚ ಗ್ಯಾರಂಟಿಯ ಹೊರೆ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಅನರ್ಹ ಫಲಾನುಭವಿಗಳು ಪಂಚ ಗ್ಯಾರಂಟಿ ಯೋಜನೆಯ ದುರ್ಬಳಕೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟರು. ಪಂಚ ಗ್ಯಾರಂಟಿ ಯೋಜನೆಯಡಿ ಇದುವರೆಗೆ 97,813 ಕೋಟಿ ರೂ. ಅನುದಾನವನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ಒಟ್ಟು 50,005 ಕೋಟಿ ರೂ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನುಭವಿಗಳಿಗೆ 18,139 ಕೋಟಿ ರೂ, ಯುವನಿಧಿ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳಿಗೆ 623 ಕೋಟಿ ರೂ, ಶಕ್ತಿ ಯೋಜನೆಯಡಿ 544 ಕೋಟಿ ಫಲಾನುಭವಿಗಳಿಗೆ 13,903 ಕೋಟಿ ರೂ ಹಾಗೂ ಅನ್ನಭಾಗ್ಯ ಯೋಜನೆಯಡಿ 72.02 ಕೋಟಿ ಫಲಾನುಭವಿಗಳಿಗೆ ಒಟ್ಟು 11,821.17 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಮರಣ ಹೊಂದುವ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ತಿಂಗಳು ಪಂಚಾಯತ್ ಹಂತದಲ್ಲಿ ನವೀಕರಿಸಿ ಸಂಬಂಧಪಟ್ಟ ಬ್ಯಾಂಕುಗಳಿಗೆ ಮಾಹಿತಿಯನ್ನು ಒದಗಿಸಬೇಕು. ಮರಣ ಹೊಂದುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು. ಪಂಚಾಯತ್ ಮಟ್ಟದಲ್ಲಿ ಫಲಾನುಭವಿಗಳ ಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
