ಉದಯವಾಹಿನಿ , ಡೆಹ್ರಾಡೂನ್ (ಉತ್ತರಾಖಂಡ): ಪ್ರತಿ ವರ್ಷ ಜ. 26ರಂದು ದೇಶಾದ್ಯಂತ ಗಣರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂವಿಧಾನ ಜಾರಿಯಾದ ಈ ದಿನವನ್ನೇ ನಾವು ಗಣರಾಜ್ಯೋತ್ಸವವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ.ಕೈ ಬರಹದಲ್ಲಿ ಬರೆದ ಸಂವಿಧಾನದ ಪ್ರತಿ: ಆದರೆ, ಈ ಸಂವಿಧಾನವನ್ನು ಯಾವುದೇ ತಂತ್ರಜ್ಞಾನ ಇಲ್ಲದ ಆಗಿನ ಕಾಲದಲ್ಲಿ ಮೊದಲು ಕೈಬರಹದಲ್ಲಿ ಬರೆಯಲಾಯಿತು ಅನ್ನೋದು ಇತಿಹಾಸ. ಆದರೆ, ಅದನ್ನು ಎಲ್ಲಿ ಮುದ್ರಿಸಲಾಯಿತು?, ಮೊದಲ ಮುದ್ರಿತ ಸಂವಿಧಾನದ ಪ್ರತಿ ಈಗ ಎಲ್ಲಿದೆ ಅನ್ನೋದು ನಿಮಗೆ ತಿಳಿದಿದೆಯೇ.
ಕೈಬರಹದಲ್ಲಿ ಬರೆಯಲಾಗಿದ್ದ ಸಂವಿಧಾನದ ಮೊದಲ ಪ್ರತಿಗಳನ್ನು ಡೆಹ್ರಾಡೂನ್‌ನಲ್ಲಿ ಮುದ್ರಿಸಲಾಯಿತು ಅನ್ನೋದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಜವಾಹರಲಾಲ್ ನೆಹರೂ ಅವರ ಆಹ್ವಾನದ ಮೇರೆಗೆ ಪ್ರೇಮ್ ಬಿಹಾರಿ ನಾರಾಯಣ್ ಎಂಬುವರು ತಮ್ಮ ಕೈಬರಹದಲ್ಲಿ ಈ ಸಂವಿಧಾನದವನ್ನು ಬರೆದರು. ಅದರ ಮೊದಲ ನಕಲು ಪ್ರತಿಯನ್ನು ಇಲ್ಲಿನ ಸರ್ವೇ ಆಫ್ ಇಂಡಿಯಾದಲ್ಲಿ ಇನ್ನೂ ಸಂರಕ್ಷಿಸಿ ಇಡಲಾಗಿದೆ.

ಈ ಬಗ್ಗೆ ಹಿರಿಯ ಪತ್ರಕರ್ತ ಹೇಳಿದ್ದಿಷ್ಟು: ಕೈಯಿಂದ ಬರೆಯಲ್ಪಟ್ಟ ಸಂವಿಧಾನದ ಮೂಲ ಪ್ರತಿಯ ಕುರಿತು ಉತ್ತರಾಖಂಡದ ಹಿರಿಯ ಪತ್ರಕರ್ತ ಮತ್ತು ಇತಿಹಾಸಕಾರ ಶೀಶ್‌ಪಾಲ್ ಗುಸೇನ್ ಮಾಹಿತಿ ನೀಡಿದ್ದು, ಇದು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾದ್ದರಿಂದ, ಮುದ್ರಣ ಪ್ರಕ್ರಿಯೆಯನ್ನು ಅದಕ್ಕೆ ಅನುಗುಣವಾಗಿ ಮಾಡಬೇಕಾಗಿತ್ತು. ಆದ್ದರಿಂದ, ಸಂವಿಧಾನದ ಮುದ್ರಣವನ್ನು ಡೆಹ್ರಾಡೂನ್‌ನಲ್ಲಿರುವ ಸರ್ವೇ ಆಫ್ ಇಂಡಿಯಾಗೆ ವಹಿಸಲಾಯಿತು. ಸರ್ವೇ ಆಫ್ ಇಂಡಿಯಾ ಈ ಜವಾಬ್ದಾರಿಯನ್ನು ವಹಿಸಿಕೊಂಡಾಗ, ಅದು ಅವರಿಗೆ ಬಹಳ ಹೆಮ್ಮೆಯ ಕ್ಷಣವಾಗಿತ್ತು. ಸರ್ವೇ ಆಫ್ ಇಂಡಿಯಾದ ಮುದ್ರಣಾಲಯವು ಆ ಕಾಲದ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಹೊಂದಿತ್ತು ಎಂದು ಕೆಲವು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.

ಮೊದಲ ಮುದ್ರಿತ ಪ್ರತಿ: ಸಂವಿಧಾನದ ಸಾವಿರಾರು ಪ್ರತಿಗಳನ್ನು ಆಗ ಸರ್ವೇ ಆಫ್ ಇಂಡಿಯಾದ ಮುದ್ರಣಾಲಯದಲ್ಲಿಯೇ ಮುದ್ರಿಸಲಾಯಿತು. ಇದು ಸಂವಿಧಾನದ ಮೊದಲ ಪ್ರತಿಯಾಗಿದ್ದರಿಂದ ಡೆಹ್ರಾಡೂನ್‌ನ ಸರ್ವೇ ಆಫ್ ಇಂಡಿಯಾದಲ್ಲಿ ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಸಂವಿಧಾನವನ್ನು ನಾರಾಯಣ್ ಅವರು ಇಟಾಲಿಕ್ ಶೈಲಿಯಲ್ಲಿ ಬರೆದರಾದರೂ ಆ ಸಮಯದಲ್ಲಿ, ಲಭ್ಯ ಇರುವ ಏಕೈಕ ಉತ್ತಮ ಗುಣಮಟ್ಟದ ಮುದ್ರಣ ಸೌಲಭ್ಯ ಎಂದರೆ ಅದು ಸರ್ವೆ ಆಫ್ ಇಂಡಿಯಾ ಪ್ರೆಸ್. ಆದ್ದರಿಂದ, ಸಂವಿಧಾನದ ಮೊದಲ ಪ್ರತಿಗಳನ್ನು ಮುದ್ರಿಸಲು ಈ ಸರ್ವೆ ಆಫ್ ಇಂಡಿಯಾ ಪ್ರೆಸ್ ಆಯ್ಕೆ ಮಾಡಲಾಯಿತು. ಪ್ರತಿ ಪುಟವನ್ನು ಶಾಂತಿ ನಿಕೇತನ್ ಕಲಾವಿದರು ಅಲಂಕರಿಸಿದರು. ನಂತರ ಸಂವಿಧಾನದ ಪ್ರತಿಯೊಂದು ಪುಟವನ್ನು ಟೆಲಿಗ್ರಾಫ್ ಮಾಡಿ ಫೋಟೋ ಲಿಥೊಗ್ರಾಫಿಕ್ ತಂತ್ರಜ್ಞಾನದ ಮೂಲಕ ಸರ್ವೇ ಆಫ್ ಇಂಡಿಯಾದಲ್ಲಿಯೇ ಪ್ರಕಟಿಸಲಾಯಿತು. ಮೂಲ ಕೈಬರಹದ ಇನ್ನೊಂದು ಪ್ರತಿಯನ್ನು ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಜೊತೆಗೆ ಸಂವಿಧಾನವನ್ನು ಮುದ್ರಿಸಲು ಬಳಸಲಾದ ಯಂತ್ರಗಳನ್ನು ಸಹ ಸರ್ವೇ ಆಫ್ ಇಂಡಿಯಾ ಕಟ್ಟಡದಲ್ಲಿ ಕಾಣಬಹುದು ಎಂದು ಗುಸೇನ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!