ಉದಯವಾಹಿನಿ, ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ನನಗೆ ಟಿಕೆಟ್ ಕೈ ತಪ್ಪಿಸಲು ನಮ್ಮ ಪಕ್ಷದಲ್ಲೇ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಸಚಿವೆ ಶೋಭಾ ಕರದ್ಲಾಂಜೆ ಅವರು, ಸ್ವಪಕ್ಷೀಯರ ವಿರುದ್ಧವೇ ಸ್ಪೋಟಕ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪಿಸಲು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿತೂರಿ ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಪಕ್ಷದ ಕೆಲಸ ಕೊಡಲಿ, ಸರ್ಕಾರದ ಕೆಲಸ ಕೊಡಲಿ ಪ್ರಮಾಣಿಕ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ಇದು ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲಸ ಮಾಡಿದವರಿಗೆ ಅವಕಾಶ ಸಿಕ್ಕಿಯೇ ಸಿಗುತ್ತದೆ. ಜಾತಿ ಸಮೀಕರಣ ಕಾರಣಕ್ಕೆ ಕೆಲ ಸಂದರ್ಭದಲ್ಲಿ ಇದು ವ್ಯತ್ಯಾಸ ಆಗಬಹುದಷ್ಟೇ. ನಮ್ಮ ಶ್ರಮ, ನಮ್ಮ ಕೆಲಸವನ್ನು ಹೈಕಮಾಂಡ್ ಗುರುತಿಸುತ್ತೆ ಎಂಬುದಕ್ಕೆ ನಾನೇ ಉದಾಹರಣೆ. ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿಯಿಂದ ನನಗೆ ಅನುಕೂಲ ಆಗಲಿದೆ.
ಪಿತೂರಿ ಮಾಡಿದಾಗಲೇ ಹೈಕಮಾಂಡ್ ನಮ್ಮ ಬಗ್ಗೆ ಗಮನ ಕೊಡುತ್ತದೆ. ವಿರೋಧ ಏಕೆ ಮಾಡುತ್ತಿದ್ದಾರೆ ಎಂಬುದರ ವರದಿ ತರಿಸಿಕೊಳ್ಳುತ್ತಾರೆ, ಆಗ ಸತ್ಯ ಗೊತ್ತಾಗುತ್ತದೆ. ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ. ಯಾವಾಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಷ್ಟೇ ಹೇಳುತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದರು.
