ಉದಯವಾಹಿನಿ, ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಸ್ಥಿರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಲೋಕಸಭಾ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ಕುರಿತ ಚರ್ಚೆ ಅಪ್ರಸ್ತುತ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿ, ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದಿರುವುದಕ್ಕೆ ಈಗಾಗಲೇ ಪ್ರತಿಕ್ರಿಯಿಸಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಮುಂದಿರುವ ಗುರಿ. ಇದು ಸಾಧ್ಯವಾದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ ಎಂದರು.

ದಲಿತ ಮುಖ್ಯಮಂತ್ರಿಯ ವಿಚಾರವಾಗಿ ಬೇರೆಬೇರೆ ವಿಚಾರಗಳು ಚರ್ಚೆಯಲ್ಲಿವೆ. ಕೆಲವರು ಇದು ಸೂಕ್ತ ಸಮಯ ಅಲ್ಲ ಎಂದರೆ, ಇನ್ನೂ ಕೆಲವರು ಅವಕಾಶ ಮಾಡಿಕೊಟ್ಟು ದಲಿತ ಸಮುದಾಯದ ಮತ ಮತ್ತಷ್ಟು ಕಾಂಗ್ರೆಸ್‍ಗೆ ಬರಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೆಲ್ಲವನ್ನೂ ಈಗ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.

ಪರಿಶಿಷ್ಟರ ಜನಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಸಮುದಾಯದ ನಾಯಕರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ರೀತಿ ಎಲ್ಲಿಯೂ ನಡೆದಿರುವ ಪ್ರಸ್ತಾವನೆಗಳಿಲ್ಲ. ಐದು ಮೀಸಲು ಕ್ಷೇತ್ರಗಳಿವೆ. ಅಲ್ಲಿ ಟಿಕೆಟ್ ಕೊಡುತ್ತಾರೆ ಎಂದರು. ಇಲ್ಲಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಪ್ರತಿದಿನವೂ ಹೊಸ ಹೊಸ ಸುಳಿವು, ಮಾಹಿತಿಗಳು ದೊರೆಯುತ್ತಿವೆ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಅದನ್ನು ಮುಂದಿಟ್ಟುಕೊಂಡೇ ಕಾರ್ಯಾಚರಣೆ ನಡೆಯುತ್ತಿದೆ. ಎನ್‍ಐಎ ಸಿಸಿಬಿ ಪೊಲೀಸರು ಜಂಟಿಯಾಗಿ ಆರೋಪಿಯ ಬೆನ್ನತ್ತಿದ್ದಾರೆ ಎಂದರು.

 

Leave a Reply

Your email address will not be published. Required fields are marked *

error: Content is protected !!