ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಈ ಬಾರಿ 28 ಲೋಕಸಭಾ ಕ್ಷೇತ್ರಗಳ ಪೈಕಿ 25ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ, ಜೆಡಿಎಸ್ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಭಾರೀ ಮತದ ಅಂತರದಿಂದ ಗೆಲ್ಲಲಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಮೋದಿ ಅವರು ಪ್ರಧಾನಿಯಾಗಬೇಕೆಂಬುದು ಇಡೀ ದೇಶದ ಜನತೆಯ ಇಚ್ಛೆಯಾಗಿದೆ. ಹೀಗಾಗಿ 28 ಕ್ಷೇತ್ರಗಳ ಪೈಕಿ ನಾವು 25ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ದಿನಾಂಕಗಳು ನಿಗದಿಯಾಗಿದೆ. ಯಾವ ದಿನಾಂಕದಂದು ಎಲ್ಲಿ ಸಭೆ ನಡೆಸಬೇಕೆಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಈಗಾಗಲೇ ಇದಕ್ಕಾಗಿ ಸಿದ್ದತೆಗಳು ನಡೆದಿವೆ ಎಂದರು.

ಮೈಸೂರು, ಕೊಡಗು ಲೋಕಸಭಾ ಕ್ಷೇತ್ರಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಸಂಪರ್ಕಿಸಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಆ ವಿಷಯದ ಬಗ್ಗೆ ನಾನು ಇಲ್ಲಿ ಚರ್ಚೆ ಮಾಡುವುದಿಲ್ಲ ಎಂದು ತುಸು ಗರಂ ಆಗಿಯೇ ಪ್ರತಿಕ್ರಿಯಿಸಿದರು. ಸಂಜೆ ಚುನಾವಣಾ ಮಂಡಳಿ ಸಭೆ ನಡೆಯಲಿದೆ. ನಾನು ಕೂಡ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ. ಬಹುತೇಕ ಇಂದು ಎಲ್ಲಾ ನಿರ್ಧಾರವಾಗಲಿದೆ ಎಂದು ಹೇಳಿದರು.
ದೆಹಲಿಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡುವವರ ಹೆಸರು ಅಂತಿಮಗೊಳ್ಳಲಿದೆ. ವಿಜಯೇಂದ್ರ ಅಲ್ಲೇ ಇದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕ ಪ್ರವಾಸ ಕೈಗೊಳುವುದು ನಿಶ್ಚಯವಾಗಿದೆ ಎಂದು ತಿಳಿಸಿದರು. ಮೈಸೂರು ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಸಂಪರ್ಕ ಮಾಡಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗಿದ್ದರೆ ಆ ವಿಚಾರ ಇಲ್ಲಿ ಪ್ರಸ್ತಾಪ ಮಾಡುವುದಿಲ್ಲ ಎಂದರು. ಹಾಲಿ ಸಂಸದರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ಈ ಬಗ್ಗೆ ಇಲ್ಲಿ ಚರ್ಚೆ ಮಾಡುವುದಿಲ್ಲ ಎಂದಷ್ಟೇ ಹೇಳಿದರು.

Leave a Reply

Your email address will not be published. Required fields are marked *

error: Content is protected !!