ಉದಯವಾಹಿನಿ, ಬೆಂಗಳೂರು: ಅನೈಸರ್ಗಿಕ ವಾಗಿ ಕೃತಕ ಬಣ್ಣ ಬರುವಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿರುವ ಕೆಂಪು ಕಾಟನ್ ಕ್ಯಾಂಡಿಗಳನ್ನು ನಿಷೇಧಿಸಲಾಗುತ್ತಿದೆ. ಅದೇ ರೀತಿ ಗೋಬಿ ಮಂಚೂರಿ ಪದಾರ್ಥ ಮೇಲೂ ನಿಗಾ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳ ಗುಣಮಟ್ಟ ಕೃತಕ ಬಣ್ಣ ಬೆರೆಸುವಿಕೆಯಿಂದಾಗಿ ಕಳಪೆಯಾಗಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಗಳ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೊಳಪಡಿಸಲಾಗಿದೆ ಎಂದು ಹೇಳಿದರು.
ಟಾರ್‍ಟ್ರಾಸೈನ್, ಸನ್‍ಸೆಟ್ ಯೆಲ್ಲೋ, ಕಾರ್ಮೋಸಿನ್ ಮತ್ತು ರೋಡಮೈನ್-ಬಿ ಇವುಗಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ರೋಡಮೈನ್-ಬಿ ಯಾವುದೇ ಆಹಾರ ಪದಾರ್ಥಗಳಲ್ಲೂ ಬಳಕೆ ಮಾಡದಂತಹ ನಿಷೇತ ಅಪಾಯಕಾರಿ ಆಹಾರ ಪದಾರ್ಥವಾಗಿದೆ. ಇನ್ನು ಟಾರ್‍ಟ್ರಾಸೈನ್, ಸನ್‍ಸೆಟ್ ಯೆಲ್ಲೊ ಮತ್ತು ಕಾರ್ಮೋಸಿನ್ ರಾಸಾಯನಿಕಗಳನ್ನು ನಿಗದಿತ ಆಹಾರ ಪದಾರ್ಥಗಳಲ್ಲಿ ಪ್ಯಾಕಿಂಗ್ ಮಾಡುವಾಗ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಲು ಅವಕಾಶ ಇದೆ.
