ಉದಯವಾಹಿನಿ, ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಲೆಕ್ಕಚಾರದಲ್ಲಿರುವ ಬಿಜೆಪಿ, ಮಾರ್ಚ್ 15ರಿಂದ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಚುನಾವಣಾ ಪ್ರಚಾರಕ್ಕೆ ರಣ ಕಹಳೆ ಮೊಳಗಿಸಲಿದೆ. ವಿಧಾನಸಭಾ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಮೋದಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಲಿದ್ದಾರೆ. ಈಗಾಗಲೇ ಚುನಾವಣೆ ಪ್ರಚಾರಕ್ಕಾಗಿ ಅವರ ಪ್ರಚಾರ ಪ್ರವಾಸದ ತಾತ್ಕಾಲಿಕ ಪಟ್ಟಿಯೊಂದು ಸಿದ್ಧಗೊಂಡಿದ್ದು, ಅದರ ಪ್ರಕಾರ ಮಾರ್ಚ್ 15ರಿಂದ ಮಾ.19ರವರೆಗೆ ಪ್ರಧಾನಿ ನರೇಂದ್ರಮೋದಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಸಂಚರಿಸಿ ಪ್ರಚಾರ ಮಾಡಲಿದ್ದಾರೆ.
ತಾತ್ಕಾಲಿಕ ಪಟ್ಟಿ ಪ್ರಕಾರ ಮಾರ್ಚ್ 15ಕ್ಕೆ ಕೋಲಾರ, ಮಾರ್ಚ್ 17ಕ್ಕೆ ಶಿವಮೊಗ್ಗ, ಮಾರ್ಚ್18ಕ್ಕೆ ಬೀದರ್, ಮಾರ್ಚ್ 19ಕ್ಕೆ ಧಾರವಾಡದಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಪೈಕಿ ರಾಜ್ಯದ 4 ಜಿಲ್ಲೆಗಳಲ್ಲಿ ಅದರ ಸುತ್ತಮುತ್ತಲಿನ ಕ್ಷೇತ್ರದವರೂ ಭಾಗಿಯಾಗಲಿದ್ದಾರೆ. ಆದರೆ ಚುನಾವಣೆ ದಿನಾಂಕ ನಿಗದಿ ಆಧಾರದ ಮೇಲೆ ಪಟ್ಟಿಯಲ್ಲಿ ಬದಲಾವಣೆಯಾಗುವುದು ಎನ್ನಲಾಗಿದೆ.
