ಉದಯವಾಹಿನಿ, ಬೆಂಗಳೂರು: ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಮನನೊಂದ ಯುವಕನೋರ್ವ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು,ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ.ಹರ್ಷಿತ್ ಮನನೊಂದು ನೇಣಿಗೆ ಶರಣಾದ ನತದೃಷ್ಟ ಪ್ರೇಮಿ. ಯುವತಿಯ ಅತ್ತೆ-ಮಾವ ಹಾಗೂ ಸಂಬಂಧಿಗಳಿಂದ ಯುವಕನಿಗೆ ಕಿರುಕುಳವಿತ್ತು.
ಇಂದ್ರಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್, ತುಮಕೂರು ಮೂಲದ ಮೃದುಲ ಯಾನೆ ಮೇಘ ಪ್ರೀತಿ ಮಾಡುತ್ತಿದ್ದ. ಆನೇಕಲ್ ಎಎಸ್ ಬಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಹುಟ್ಟಿಕೊಂಡಿತ್ತು. ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಇವರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ತಂದೆ-ತಾಯಿ ಇಲ್ಲದ ಮೃದುಲ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ದಳು. ಯುವತಿಯ ಮನೆಗೆ ಇವರ ಪ್ರೀತಿಯ ವಿಚಾರ ತಿಳಿದಿದ್ದು, ಯುವಕ ಹರ್ಷಿತ್‌ಗೆ ನಿಂದಿಸಿದ್ದಾರೆ. ಯುವತಿಯ ಬಳಿ ಮಾತನಾಡದಂತೆ ಧಮಕಿ ಹಾಕಿದ್ದರು. ಯುವತಿಗೂ ಆಕೆಯ ಅತ್ತೆ ಮಾವ ನಿರ್ಬಂಧ ಹಾಕಿದ್ದರು. ಯುವತಿಯೂ ಇದರಿಂದ ಬೆದರಿ ಹರ್ಷಿತ್ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು. ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹರ್ಷಿತ್‌ಗೆ ಫೋನ್ ಮಾಡಿ, ಮೃದುಳ್‌ಳನ್ನು ತಾನೇ ಮದುವೆಯಾಗುತ್ತೇನೆ, ಆಕೆಯ ತಂಟೆಗೆ ನೀನು ಬರಬಾರದು ಎಂದು ಧಮಕಿ ಹಾಕಿದ್ದ. ಇದರಿಂದ ಸಾಕಷ್ಟು ಮನನೊಂದಿದ್ದ ಹರ್ಷಿತ್, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬ್ಲೇಡ್‌ನಿಂದ ಕೈ ಕೊಯ್ದುಕೊಂಡಿದ್ದಲ್ಲದೆ ಅದರ ಫೋಟೋ ತೆಗೆದು ತಾಯಿಯ ಮೊಬೈಲ್ ಹಾಗೂ ಹುಡುಗಿಯ ನಂಬರ್‌ಗೆ ವಾಟ್ಸಾಪ್ ಮಾಡಿದ್ದ.
ತಾಯಿ ಹಾಗೂ ತಂದೆ ಇದನ್ನು ನೋಡಿ ಮನೆಗೆ ಬಂದು ನೋಡುವಷ್ಟರಲ್ಲಿ ಕೈ ಕೊಯ್ದುಕೊಂಡು ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಯುವತಿ ಮೃದುಲ ಅಲಿಯಾಸ್ ಮೇಘ, ಆಕೆಯ ಅತ್ತೆ ಕವಿತಾ, ಮಾವ, ಜೊತೆಗೆ ಅಪರಿಚಿತ ನಂಬರ್‌ನಿಂದ ಫೋನ್ ಮಾಡಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
