ಉದಯವಾಹಿನಿ, ಬೆಂಗಳೂರು: ದ್ವಿ-ಚಕ್ರ ವಾಹನ ಕಳವು ಮಾಡಿ, ಚಿನ್ನದ ಸರ ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಬಂಧಿಸಿರುವ ಸುಬ್ರಮಣ್ಯಪುರ ಪೊಲೀಸರು
೨೨.೫೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ತುಮಕೂರಿನ ಅಭಿಷೇಕ್ (೨೧) ಹಾಗೂ ಬೆಂಗಳೂರಿನ ಶಶಿಧರ(೨೩) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ ೨೨,೫೦ ಲಕ್ಷ ಮೌಲ್ಯದ ೩೬೫ ಗ್ರಾಂ ಚಿನ್ನಾಭರಣಗಳು,ಬೈಕ್ ನ್ನು ವಶಪಡಿಸಿಕೊಳ್ಳಲಾಗಿದ್ದು ಬಂಧಿತರ ವಿರುದ್ಧ ನಗರ, ಗ್ರಾಮಾಂತರ ಸೇರಿ ವಿವಿಧ ಠಾಣಾ ವ್ಯಾಪ್ತಿಯ ೧೧ ಸರ ಅಪಹರಣ ಪ್ರಕರಣಗಳು ದಾಖಲಾಗಿರುತ್ತವೆ, ಒಂದು ರಾತ್ರಿ ಮನೆ ಕಳವು ಪ್ರಕರಣ ಮತ್ತು ಒಂದು ದ್ವಿ-ಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿವೆ ಎಂದರು.
ಕಳೆದ ಫೆ.೧೫ ರಂದು ರಾತ್ರಿ ಅಂಗಡಿಗೆ ಹೋಗಿ ವಾಪಸ್ಸು ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರ ಹಿಂದಿನಿಂದ ಬಂದು, ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ದೋಚಿ ಬಂಧಿತ ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗಿದ್ದ ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯಪುರ ಪೊಲೀಸರು ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
೭ ಮಂದಿ ಸೆರೆ. ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ೭ ಮಂದಿ ಆರೋಪಿಗಳನ್ನು ಬಂಧಿಸಿರುವ ಬೆಳ್ಳಂದೂರು ಪೊಲೀಸರು ೪ ಲಕ್ಷ ಮೌಲ್ಯದ ೩ ದ್ವಿ-ಚಕ್ರ ವಾಹನಗಳು ೨ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.
ಬೆಳ್ಳಂದೂರು ಬಳಿಯ ನಿರ್ಜನ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಇಬ್ಬರನ್ನು ಅಡ್ಡಗಟ್ಟಿ ಚಾಕು ತೋರಿಸಿ, ಬೆದರಿಸಿ ೨ ಮೊಬೈಲ್ ಎಟಿಎಂ ಕಾರ್ಡ್‌ಗಳನ್ನು ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಇನ್ನಿಬ್ಬರು ಕಾನೂನು ಸಂಘರ್ಷಕ್ಕೋಳಗಾದ ಬಾಲಕರನ್ನು ಬಾಲ ನ್ಯಾಯಮಂಡಳಿಗೆ ಒಪ್ಪಿಸಲಾಗಿದೆ.
ಇದೇ ರೀತಿಯ ಕೃತ್ಯವನ್ನು ವರ್ತೂರು ಪೊಲೀಸ್ ಠಾಣೆ ಮತ್ತು ಸೂರ್ಯನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ವೆಸಗಿದ್ದು, ಈ ಸಂಬಂಧ ವಶಪಡಿಸಿಕೊಂಡಿದ್ದ ವ್ಯಕ್ತಿಗಳನ್ನು ಸುದೀರ್ಘವಾಗಿ ವಿಚಾರಣೆ ಕೈಗೊಂಡು, ಬೆಳ್ಳಂದೂರು ೩, ವರ್ತೂರು, ಹೆಬ್ಬಗೋಡಿ, ಸೂರ್ಯನಗರ ತಲಾ ೧ ಪ್ರಕರಣ ಪತ್ತೆಹಚ್ಚಲಾಗಿದೆ ಎಂದರು.

 

Leave a Reply

Your email address will not be published. Required fields are marked *

error: Content is protected !!