ಉದಯವಾಹಿನಿ, ವಿಜಯಪುರ: ರಂಗಗೀತೆ ಗಾಯನವು ಜೀವಂತವಾಗಿರಿಸುವಲ್ಲಿ ಎಲ್ಲರ ಪಾತ್ರ ಬಹಳ ಅಮೂಲ್ಯವಾದುದು. ರಂಗಗೀತೆ ಎಂಬುದು ವ್ಯಕ್ತಿಯ ಸಾಧ್ಯತೆಗಳು ಅರಳಲು ಮತ್ತು ತನ್ನ ಸಾಮರ್ಥ್ಯವನ್ನು ರೂಪಿಸಿಕೊಳ್ಳಲು ಸಾಧನೆಯ ಹಾದಿಯಾಗಿದೆ ಎಂದು ಉದಯ್ ಕಲ್ಚರಲ್ ಅಕಾಡಮಿ ಟ್ರಸ್ಟ್ ಅಧ್ಯಕ್ಷ ಹಾಗೂ ವಕೀಲ ಎನ್ ರಾಮಮೂರ್ತಿ ತಿಳಿಸಿದರು.
ಇವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉದಯ್ ಕಲ್ಚರಲ್ ಅಕಾಡಮಿ ಟ್ರಸ್ಟ್, ಅರ್ಬಲ್ ಅಂಡ್ ರೂರಲ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಂಗ ಗೀತೆ ಗಾಯನ ಹಾಗೂ ಯಕ್ಷಗಾನ ನೃತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿಯು ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿಗೆ ಸರಿಯಾಗಿ ಸ್ಪಂದಿಸಿದಾಗ ಕ್ರಿಯಾಶೀಲತೆಯನ್ನು ಪಡೆದು ಕೊಳ್ಳುತ್ತದೆ. ರಂಗಭೂಮಿಯನ್ನು ಜೀವಂತವಾಗಿರಿಸುವಲ್ಲಿ ಎಲ್ಲರ ಪಾತ್ರ ಬಹಳ ಅಮೂಲ್ಯವಾದುದು ಎಂದರು.
ಮುಖ್ಯೋಪಾಧ್ಯಾಯರು ಹಾಗೂ ರಂಗಕಲಾ ನಿರ್ದೇಶಕರೂ ಆದ ಎ.ಎಂ.ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಕೆಲ ಕಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಜೀವನ ವೌಲ್ಯಗಳು, ಮಾನವೀಯ ಸಂಬಂಧಗಳು, ಪ್ರೀತಿ, ವಿಶ್ವಾಸ, ಶಾಂತಿ, ಸಹಬಾಳ್ವೆಯನ್ನು ರಕ್ಷಿಸಿಕೊಳ್ಳ ಬೇಕಾದಲ್ಲಿ ರಂಗಭೂಮಿ ಒಂದು ಅತ್ಯುತ್ತಮ ವೇದಿಕೆಯಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ರಂಗ ಗೀತೆ ಗಾಯನ ಹಾಗೂ ಯಕ್ಷಗಾನ ನೃತ್ಯದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನದೊಂದಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎಂ.ವಿ. ನಾಯ್ಡು, ಮುಖ್ಯೋಪಾಧ್ಯಾಯರು ಹಾಗೂ ರಂಗಕಲಾ ನಿರ್ದೇಶಕರೂ ಆದ ಎ.ಎಂ.ನಾರಾಯಣಸ್ವಾಮಿ, ಕಿರುಚಿತ್ರ ನಿರ್ದೇಶಕ ವೆಂಕಟೇಶ್‌ರವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎಂ.ವಿ. ನಾಯ್ಡು, ಎಸ್. ಡಿ. ಎಂ. ಸಿ ಅಧ್ಯಕ್ಷ ಮುನಿವೆಂಕಟಪ್ಪ, ಸಿ.ಆರ್.ಪಿ ದಿನೇಶ್ ಕುಮಾರ್, ಕಿರುಚಿತ್ರ ನಿರ್ದೇಶಕ ವೆಂಕಟೇಶ್, ಶಿಕ್ಷಕರಾದ ಪ್ರಕಾಶ್, ಬೈರೇಗೌಡ, ಗೀತಾ,ಉದಯ್ ಕಲ್ಚರ್ ಅಕಾಡೆಮಿಯ ಕಾರ್ಯದರ್ಶಿ ಪಿ.ಎನ್ ಪುಷ್ವ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು
