ಉದಯವಾಹಿನಿ, ಬೆಂಗಳೂರು: ಗ್ಯಾರಂಟಿಗಳ ಸ್ವತಃ ಸಚಿವರಿಗೆ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಅವರೆಲ್ಲರೂ ಅರಬರೆ ಜ್ಞಾನದಿಂದ ಮಾತನಾಡುತ್ತಿದ್ದಾರೆ. ಅದು ಜನತೆಗೂ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ವಿವಿಧ ಜಿಲ್ಲೆಗಳ ಮುಖಂಡರ ಆತ್ಮಾವಲೋಕನ ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.ಮುಖ್ಯವಾಗಿ ಗೃಹಲಕ್ಷ್ಮಿ ಕಾರ್ಯಕ್ರಮದಲ್ಲಿ ಮತ್ತೊಂದು ಗೊಂದಲ ತಂದಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಅವರು, ಅವರೊಬ್ಬ ಸಚಿವರಷ್ಟೇ ಅಲ್ಲ, ಬಹುತೇಕ ಎಲ್ಲ ಸಚಿವರಿಗೆ ಗ್ಯಾರಂಟಿಗಳ ಯಾವ ಗ್ಯಾರಂಟಿಯೂ ಇಲ್ಲ ಎಂದರು.ಇದು ಒಂದು ಕಾರ್ಯಕ್ರಮದ ಗೊಂದಲ ಅಲ್ಲ, ಐದು ಕಾರ್ಯಕ್ರಮಗಳ ಗೊಂದಲ. ಯಾರಿಗೂ ಯಾವ ಸ್ಪಷ್ಟತೆಯೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾರಂಟಿಗಳು ಲೇವಡಿಯ ವಸ್ತುವಾಗಿವೆ. ಮಾಧ್ಯಮಗಳಲ್ಲಿ ಕೂಡ ಇವುಗಳ ಬಗ್ಗೆ ಸಾಕಷ್ಟು ನಕಾರಾತ್ಮಕ ವರದಿಗಳು ಬರುತ್ತಿವೆ ಎಂದು ಕುಮಾರಸ್ವಾಮಿ ಅವರು ಉಲ್ಲೇಖ ಮಾಡಿದರು.ಗೃಹಜ್ಯೋತಿ ಯೋಜನೆಯ ಬಗ್ಗೆ ಹೇಳುವುದೇ ಬೇಡ ಎನಿಸುತ್ತದೆ. ಏಕೆಂದರೆ, ಇಂಧನ ಇಲಾಖೆಯನ್ನು ಮುನ್ನಡೆಸುತ್ತಿರುವ ಸಚಿವರಾದ ಜಾರ್ಜ್ ಅವರಿಗೆ ಈ ಕಾರ್ಯಕ್ರಮ ಅರ್ಥ ಆಗಿಲ್ಲ. ಅವರು ತಾಳಮೇಳ ಇಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ಇಲ್ಲ, ಯಾಕೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡುತ್ತಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅತೀವ ಕುತೂಹಲ, ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಕೊನೆಪಕ್ಷ ಆ ಇಲಾಖೆಗಳನ್ನು ಮುನ್ನಡೆಸುವ ಇಬ್ಬರೂ ಸಚಿವರಿಗೆ ಈ ಕಾರ್ಯಕ್ರಮಗಳ ಬಗ್ಗೆ ಖಾತರಿ, ಸ್ಪಷ್ಟತೆ ಇಲ್ಲ ಎನ್ನುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು ಎನ್ನುವುದು ನನಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಈಗ ನೋಡಿದರೆ ಸರಕಾರ ಸಬೂಬುಗಳ ಪಟ್ಟಿ ಮಾಡಿಕೊಂಡು ಕಾಲಹರಣ ಮಾಡುತ್ತಿದೆ, ಜನರ ನಂಬಿಕೆಯ ಹರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

Leave a Reply

Your email address will not be published. Required fields are marked *

error: Content is protected !!