ಉದಯವಾಹಿನಿ, ಬೆಂಗಳೂರು, : ರಾಜ್ಯ ವಿಧಾನಸಭೆ ಚುನಾವಣೆ ಸೋಲಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಕರ್ನಾಟಕ ಬಿಜೆಪಿಯಲ್ಲಿ ಮೇಜರ್‌ ಸರ್ಜರಿ ನಡೆಯಲಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆ ಪಕ್ಷದ ಸಾರಥ್ಯವನ್ನು ಹೊಸಬರಿಗೆ ನೀಡುವ ಮಾತುಗಳು ಕೇಳಿ ಬರುತ್ತಿವೆ.ರಾಜ್ಯದಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್‌ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಟಾರ್ಗೆಟ್‌ ಹಾಕಿಕೊಂಡಿದ್ದು, ಲೋಕಸಭಾ ಚುನಾವಣಾ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಆದ ತಪ್ಪು ಮತ್ತೆ ಆಗಬಾರದು ಎಂದು ಬಿಜೆಪಿ ನೂತನ ಸಾರಥಿಯನ್ನ ನೇಮಿಸಲು ಸಿದ್ದತೆಯನ್ನ ನಡೆಸಿದೆ.ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರ ಮೂರು ವರ್ಷದ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಸಂಭವ ಹೆಚ್ಚಾಗಿದ್ದು, ಹೊಸ ಸಾರಥಿ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿಗಳ ಮೂಲಕ ಜನರ ವಿಶ್ವಾಸ ವೃದ್ಧಿಯ ಉತ್ಸಾಹದಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ ಸರಕಾರವನ್ನು ಎದುರಿಸಲು ಸಮರ್ಥ ಪ್ರತಿಪಕ್ಷ ನಾಯಕ ಹಾಗೂ ಪಕ್ಷವನ್ನ ಬಲಪಡಿಸಲು ನೂತನ ರಾಜ್ಯಾಧ್ಯಕ್ಷರ ನೇಮಿಸಲು ಬಿಜೆಪಿ ಹೈಕಮಾಂಡ್‌ ಚಿಂತನೆ ನಡೆಸಿದೆ.ಇನ್ನೂ ಜುಲೈನಲ್ಲಿ ಕಾಂಗ್ರೆಸ್‌ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯಲಿದ್ದು, ಸರಕಾರದ ನಡೆಯನ್ನು ಪರಿಣಾಮಕಾರಿಯಾಗಿ ವಿಮರ್ಶೆ ನಡೆಸಿ, ಗಟ್ಟಿ ಧ್ವನಿ ಎತ್ತುವ ನಾಯಕನನ್ನೇ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಬೇಕಿದೆ. ಅಲ್ಲದೇ ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಬಿಬಿಎಂಪಿ ಚುನಾವಣೆ ಎದುರಾಗಲಿವೆ. ಈಗಾಗಲೇ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಬಿಬಿಎಂಪಿ ಚುನಾವಣೆಗೂ ಭರ್ಜರಿ ತಯಾರಿ ನಡೆಸುತ್ತಿದ್ದು, ಬಿಜೆಪಿ ಮೇಜರ್‌ ಸರ್ಜರಿಗೆ ಮುಂದಾಗಿದೆ.2024 ರ ಲೋಕಸಭಾ ಚುನಾವಣೆಗೂ ಸಿದ್ಧತೆಯಲ್ಲಿರುವ ಬಿಜೆಪಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ, ಒಕ್ಕಲಿಗ ಹಾಗೂ ಹಿಂದುಳಿದ ವರ್ಗದ ವರ್ಚಸ್ವಿ ನಾಯಕರಿಗೆ ಮಣೆ ಹಾಕುವ ಬಗ್ಗೆ ಬಿಜೆಪಿ ಪಕ್ಷದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದ್ದು, ಹಲವು ನಾಯಕರ ಹೆಸರು ರೇಸ್‌ ನಲ್ಲಿ ಕೇಳಿ ಬರುತ್ತಿದೆ.ಪ್ರತಿಪಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಿ ಆ ಸಮುದಾಯಕ್ಕೆ ಪಕ್ಷದಲ್ಲಿ ಪ್ರಾತಿನಿಧ್ಯ ಮುಂದುವರಿಸಿರುವ ಸಂದೇಶ ಸಾರುವ ಲೆಕ್ಕಾಚಾರ ಒಂದುಕಡೆಯಾದ್ರೆ ಇತ್ತ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯದವರಿಗೆ ಕೊಡುವ ಕುರಿತು ಚಿಂತನೆ ನಡೆಸಲಾಗಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್, ಆರ್.ಅಶೋಕ, ಅರವಿಂದ್ ಬೆಲ್ಲದ್,ಸಿ ಟಿ ರವಿ ಹಾಗೂ ಶೋಭಾ ಕರಂದ್ಲಾಜೆ ಸೇರಿದಂತೆ ಹಲವುರು ರೇಸ್‌ ನಲ್ಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!