ಉದಯವಾಹಿನಿ, ಬೆಂಗಳೂರು : ರಾಜಧಾನಿ ಬೆಂಗಳೂರಿಗೆ ದಕ್ಷ ಮತ್ತು ಪ್ರಾಮಾಣಿಕರಾಗಿರುವ ಸಚಿವರೊಬ್ಬರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕೆಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ಪುಟಗಳ ಪತ್ರ ಬರೆದಿರುವ ಮುನಿರತ್ನ ಅವರು, ಬೆಂಗಳೂರಿಗೆ ದಕ್ಷ ಮತ್ತು ಪ್ರಾಮಾಣಿಕರಾಗಿರುವವರು ಉಸ್ತುವಾರಿಗಳಾಗಿ ನೇಮಕ ಮಾಡಬೇಕಾದ ಅಗತ್ಯವಿದೆ. ಒಂದು ವೇಳೆ ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ಬಗ್ಗೆ ನಿಜವಾದ ಕಳಕಳಿ ಇದ್ದರೆ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ ಅವರುಗಳನ್ನು ನೇಮಕ ಮಾಡುವಂತೆ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.
ಒಂದು ವೇಳೆ ಇವರ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡಬೇಕೆಂಬ ಇಚ್ಛೆ ಇದ್ದರೆ ಸಚಿವ ದಿನೇಶ್ ಗುಂಡೂರಾವ್ ಇಲ್ಲವೇ…? ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರನ್ನಾದರೂ ನೇಮಕ ಮಾಡುವಂತೆಯೂ ಮನವಿ ಮಾಡಿದ್ದಾರೆ.
16ನೇ ಆಯವ್ಯಯದಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಆಂಧ್ರ ಪ್ರದೇಶದ ಮುಖ್ಯಂತ್ರಿಗಳ ಸಹಚರರು ಹಾಗೂ ಕೆಲವು ಬಲಿಷ್ಟ ಗುತ್ತಿಗೆದಾರರು ನಮ್ಮ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡಲು ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ನೀಡಿರುವ ಅನುದಾನವನ್ನು ಖರೀದಿ ಮಾಡಲು ಹೊರ ರಾಜ್ಯದ ಗುತ್ತಿಗೆದಾರರು ಈಗಾಗಲೇ ಶೇ.12% ರಷ್ಟು ಮುಂಗಡ ಹಣ ನೀಡಿದ್ದಾರೆ. ಕಾರ್ಯಾದೇಶ ಕೊಟ್ಟನಂತರ ಶೇ.8೪ ಮತ್ತು ಅನುದಾನ ಬಿಡುಗಡೆ ಮಾಡುವುದಕ್ಕೆ ಶೇ.15% ಒಟ್ಟಾರೆ ಸುಮಾರು 35% ಗಳಿಗೆ ಈಗಾಗಲೇ ಪಂಚ ನಕ್ಷತ್ರ ಹೋಟೆಲ್‌ಗಳಲ್ಲಿ ವ್ಯವಹಾರಗಳನ್ನು ಕುದುರಿಸಿ ಮುಂಗಡ ಹಣವನ್ನು ನೀಡಿದ್ದಾರೆ ಎಂದು ಮುನಿರತ್ನ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
