ಉದಯವಾಹಿನಿ, ಭೋಪಾಲ್: ಮಧ್ಯ ಪ್ರದೇಶದ ಇಂದೋರ್‌ನ ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಪುತ್ರ ಅಂಜನೇಶ್ ಶುಕ್ಲಾ ಅವರ ವಿವಾಹವು ಅದ್ಧೂರಿಯಾಗಿ ನೆರವೇರಿದೆ. ಅವರ ವಿವಾಹದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ವೈಭವದ ಮದುವೆಯ ದೃಶ್ಯ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ದಿಗ್ಭ್ರಮೆಗೊಂಡಿದ್ದಾರೆ. ವಿವಾಹ ಸ್ಥಳವು ಬಹಳ ವೈಭವದಿಂದ ಕೂಡಿತ್ತು. ಕೇವಲ ಪಟಾಕಿಗಳಿಗಾಗಿಯೇ ಸುಮಾರು 70 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ.
ಮದುವೆ ಸ್ಥಳವನ್ನು ಬಹಳ ವಿಭಿನ್ನವಾಗಿ ಚಿತ್ರಿಸಲಾಗಿತ್ತು. ಆವರಣದಾದ್ಯಂತ ಹಿಂದೂ ದೇವತೆಗಳ ವಿಗ್ರಹಗಳನ್ನು ಪ್ರದರ್ಶಿಸಲಾಗಿತ್ತು. ಮುಖ್ಯ ವೇದಿಕೆಯಲ್ಲಿ ಈಶ್ವರನ ಪ್ರತಿಮೆಯನ್ನು ಪ್ರದರ್ಶಿಸಲಾಗಿದೆ. ಅದಕ್ಕೂ ಮೊದಲು ಅದ್ಧೂರಿಯಾಗಿ ಹೂಮಾಲೆ ಬದಲಾಯಿಸುವ ಸಮಾರಂಭ ನೆರವೇರಿತು. ತನ್ನ ವಿಶೇಷ ದಿನಕ್ಕೆ ಅಂಜನೇಶ್ ಕಸೂತಿ ಕೆಲಸದಿಂದ ಅಲಂಕರಿಸಲ್ಪಟ್ಟ ಶೇರ್ವಾನಿಯನ್ನು ಆರಿಸಿಕೊಂಡರೆ, ವಧುವು ಸಾಂಪ್ರದಾಯಿಕ ಸಿಮರ್ ಉಡುಪನ್ನು ಧರಿಸಿದ್ದಳು. ವಧುವಿನ ಉಡುಪನ್ನು ಫ್ಯಾಷನ್ ಡಿಸೈನರ್ಸ್ ರಿಂಪಲ್ ಮತ್ತು ಹರ್‌ಪ್ರೀತ್ ವಿನ್ಯಾಸಗೊಳಿಸಿದ್ದಾರೆ . ಮದುವೆ ಸಂಭ್ರಮದ ಪ್ರಮುಖ ಅಂಶಗಳಲ್ಲಿ ವರ್ಮಾಲ ಸಮಾರಂಭದ ನಂತರ ನಡೆದ ದೊಡ್ಡ ಪ್ರಮಾಣದ ಪಟಾಕಿ ಪ್ರದರ್ಶನವೂ ಒಂದು. ರಾತ್ರಿ ವೇಳೆ ಆಕಾಶದಲ್ಲಿ ಪಟಾಕಿಗಳು ಬೆಳಗುತ್ತಿರುವುದನ್ನು ವೀಕ್ಷಿಸಲು ಅತಿಥಿಗಳು ಒಟ್ಟುಗೂಡಿದರು. ಆ ಕ್ಷಣವನ್ನು ವಿವಾಹದ ದೃಶ್ಯ ಕೇಂದ್ರಬಿಂದುವನ್ನಾಗಿ ಪರಿವರ್ತಿಸಿದರು. ಬರೋಬ್ಬರಿ 70 ಲಕ್ಷ ರೂ. ಪಟಾಕಿಗೆಂದೇ ಖರ್ಚು ಮಾಡಲಾಗಿದೆ ಎನ್ನಲಾಗಿದ್ದು, ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹಂಚಲ್ಪಟ್ಟಿವೆ.
