ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ ಅಂತ್ಯಕ್ಕೆ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್‌ನೊಂದಿಗಿನ ಸಮಾಲೋಚನೆ ಜೊತೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಜು.30ಕ್ಕೆ ಸಿದ್ದರಾಮಯ್ಯ ಮತ್ತು ಕೆಲ ಸಚಿವರು ದೆಹಲಿಗೆ ಭೇಟಿ ನೀಡಲಿದ್ದಾರೆ. ಕನ್ನಡ ಧ್ವಜಕ್ಕೆ ಅಧಿಕೃತ ಸ್ಥಾನಮಾನ ಘೋಷಿಸುವಂತೆ ಈ ವೇಳೆ ಕೇಂದ್ರದ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಈಗಾಗಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಆದರೆ ಕೇಂದ್ರದಿಂದ ದೊರೆಯುತ್ತಿರುವ ಅನುದಾನದ ಪ್ರಮಾಣ ಕಡಿಮೆ ಇದೆ. ತಮಿಳುನಾಡಿಗೆ ಸ್ಥಾನಮಾನ ಸಿಕ್ಕಿದ್ದು, ಹೆಚ್ಚಿನ ಅನುದಾನವು ದೊರೆಯುತ್ತಿದೆ. ಆದರೆ ಕರ್ನಾಟಕದ ವಿಷಯದಲ್ಲಿ ತಾರತಮ್ಯವಾಗುತ್ತಿದೆ ಎಂಬ ಆರೋಪ ಇದೆ.
ಕನ್ನಡಧ್ವಜಕ್ಕೆ ಹಳದಿ ಮತ್ತು ಕೆಂಪು ಮಿಶ್ರಿತ ಬಾವುಟವನ್ನು ರೂಢಿ ಮಾಡಿಕೊಳ್ಳಲಾಗಿದೆ. ಆದರೆ ಅದಕ್ಕೆ ಕೇಂದ್ರಸರ್ಕಾರದಿಂದ ಯಾವುದೇ ಅಧಿಕೃತ ಮಾನ್ಯತೆ ಇಲ್ಲ.ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ 2015 ರಲ್ಲಿ ಈ ಬಗ್ಗೆ ಗರಿಷ್ಠ ಪ್ರಯತ್ನ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅಧಿಕೃತ ಸ್ಥಾನಮಾನವನ್ನು ತಳ್ಳಿಹಾಕಿತ್ತು. ಹೀಗಾಗಿ ಎರಡನೇ ಹಂತದಲ್ಲಿ ರಾಜ್ಯಸರ್ಕಾರ ಮತ್ತೊಂದು ಸುತ್ತಿನ ಪ್ರಯತ್ನ ಮುಂದುವರೆಸಿದೆ.
