ಉದಯವಾಹಿನಿ, ಬೆಂಗಳೂರು: ಬಿಜೆಪಿ ನಾಯಕರು ಸರ್ಕಾರವನ್ನು ಬುಡಮೇಲು ಮಾಡುವುದರಲ್ಲಿ ಡಾಕ್ಟರೇಟ್ ಮಾಡಿರುವ ಅಮಿತ್ ಶಾ (Amit Shah) ಸಲಹೆ ಪಡೆದು ಬಂದಿದ್ದಾರೆ ಎಂದು ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾತಾಡಿದ ಹರಿಪ್ರಸಾದ್, ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಸರಿಯಿಲ್ಲ ಎಂದು ಹೇಳಿ ಬಿಜೆಪಿ ಚರಂಡಿಯಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡಿದೆ. ಹಿಂದೂಗಳ ಲ್ಯಾಬೊರೇಟರಿ ಆಗಿದ್ದಂತಹ ದಕ್ಷಿಣ ಕನ್ನಡದಲ್ಲಿ ಶಾಂತಿ ನೆಲಸಲು ಸಿದ್ದರಾಮಯ್ಯ ಅವರ ದಿಟ್ಟ ನಿರ್ಧಾರ ಕಾರಣ. ಈಗ ಅಲ್ಲಿ ಶಾಂತಿ ನೆಲೆಸಿರುವುದರಿಂದ ಬಿಜೆಪಿಗೆ ರೋಟಿ, ಕಪಡಾ, ಮಕಾನ್ ಬಂದ್ ಆಗಿದೆ. ಅದನ್ನು ಪುನರ್ ಸ್ಥಾಪನೆ ಮಾಡಲು ಬೇರೆ ಜಿಲ್ಲೆಯಲ್ಲಿ ಹೋಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾಲೆಳೆದರು.
ನಮ್ಮ ಸರ್ಕಾರ ಬಂದಾಗಿಂದಲೂ ಇಲ್ಲಿಯವರೆಗೆ ಬಿಜೆಪಿ ಬಡವರು, ರೈತರು, ಕಾರ್ಮಿಕರ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಏನಾದರೂ ಚರ್ಚೆ ಮಾಡಿದ್ದಾರಾ…? ಯಾವಾಗಲೂ ಪಾಳುಬಿದ್ದ ಸ್ಮಶಾನ, ಪಾಳುಬಿದ್ದ ದೇವಸ್ಥಾನ ಹುಡುಕಿ ರಾಜಕೀಯ ಮಾಡುತ್ತಾರೆ. ಧರ್ಮಸ್ಥಳದಲ್ಲಿ ಆಗುತ್ತಿರುವ ಜಗಳ ಧರ್ಮಸ್ಥಳದ ವಿಚಾರವಾಗಿ ಅಲ್ಲ. ಬಿಜೆಪಿಯಲ್ಲಿರುವ ಸ್ವಯಂ ಸೇವಕ ಸಂಘದ ಅಗ್ರಗಣ್ಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಬಿ.ಎಲ್ ಸಂತೋಷ್ ನಡುವಿನ ಜಗಳ ಧರ್ಮಸ್ಥಳವನ್ನ ಹಾಳು ಮಾಡುತ್ತಿದೆ. ಅಲ್ಲಿ ಶಾಂತಿ ನೆಲೆಸಿರುವುದು ಇವರಿಗೆ ಹಿಡಿಸುತ್ತಿಲ್ಲ. ಏನಾದರೂ ಮಾಡಿ ಕೆದಕಲು ನೋಡುತ್ತಿದ್ದಾರೆ, ಅದು ನಡೆಯಲ್ಲ. ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ. ಸಂಘ ಪರಿವಾರದ ನಡುವಿನ ಜಗಳದಿಂದಲೇ ಧರ್ಮಸ್ಥಳದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಆರೋಪಿಸಿದರು.
