ಉದಯವಾಹಿನಿ, ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ನಾಶದ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ಸಿಬಿಐನಿಂದ ಬಂಧಿತರಾಗಿ ಸೆರೆವಾಸ ಅನುಭವಿಸಿದ್ದ ವಿನಯ್ ಕುಲಕರ್ಣಿ, ಜಾಮೀನಿನ ಮೇಲೆ ಹೊರ ಬಂದು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಲಯ ಇವರ ಜಾಮೀನು ರದ್ದು ಮಾಡಿದ್ದರಿಂದ ಮರಳಿ ಅವರು ಪರಪ್ಪನ ಅಗ್ರಹಾರ ಸೇರಬೇಕಾಯಿತು. ಈಗ ತಮ್ಮ ಮಗ ಹೇಮಂತ್ ಅವರಿಗೆ ಅಪಘಾತವಾಗಿದ್ದರಿಂದ ಆತನ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸುತ್ತಿರುವುದರಿಂದ ತಮಗೆ ಜಾಮೀನು ನೀಡಬೇಕು ಎಂದು ಕೋರಿ ಶಾಸಕ ವಿನಯ್ ಅವರು ಮರಳಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕೇವಲ ಎರಡು ದಿನಗಳವರೆಗೆ ಮಾತ್ರ ಜಾಮೀನು ಮಂಜೂರು ಮಾಡಿದೆ. ಮರಳಿ ವಿನಯ್ ಕುಲಕರ್ಣಿ ಅವರು ಸೆ.11ರ ಸಂಜೆ 5ಕ್ಕೆ ಸಿಬಿಐ ಅಧಿಕಾರಿಗಳ ಎದುರು ಹಾಜರಾಗಿ ಮರಳಿ ಜೈಲು ಸೇರಬೇಕಿದೆ.
ಸದ್ಯ ಎರಡು ದಿನಗಳ ಕಾಲ ಜಾಮೀನು ಸಿಕ್ಕಿರುವ ವಿನಯ್ ಕುಲಕರ್ಣಿ ಅವರನ್ನು ಮಂಗಳವಾರ ಸಂಜೆಯೇ ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಬೆಂಗಳೂರಿನಲ್ಲೇ ನಡೆಯುವುದರಿಂದ ವಿನಯ್ ಅವರು ಬೆಂಗಳೂರಿನಲ್ಲೇ ಉಳಿಯಬೇಕಾಗಿದೆ. ಜಾಮೀನು ಸಿಕ್ಕಿರುವ ಈ ಎರಡು ದಿನಗಳ ಅವಧಿಯಲ್ಲಿ ಯಾವುದೇ ಸಭೆ ಮಾಡುವಂತಿಲ್ಲ ಎಂದು ಶಾಸಕ ವಿನಯ್‌ಗೆ ನ್ಯಾಯಾಲಯ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!