ಉದಯವಾಹಿನಿ, ಬೆಂಗಳೂರು: ಕರ್ನಾಟಕದ ಪ್ರತಿಮಾ ರಾವ್ ಮತ್ತು ಶಿಲ್ಪಾ ಪುಟ್ಟರಾಜು ಎಲ್ಲಾ ಕ್ರೀಡಾಪಟುಗಳಂತಲ್ಲ. ತಮ್ಮ ವಿಶೇಷಚೇತನವನ್ನು ನಿವಾರಿಸಿಕೊಂಡು ಆಟದಲ್ಲಿ ಕಠಿಣವಾಗಿ ಉತ್ತಮ ಪ್ರದರ್ಶನ ನೀಡಿರುವ ವೀಲ್‌ಚೇರ್ ಟೆನಿಸ್ ಆಟಗಾರ್ತಿಯರು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೂರು ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇಬ್ಬರೂ ಸಿಂಗಲ್ಸ್ ಸ್ವರೂಪದಲ್ಲಿ ಆಟವಾಡಿ ನಂತರ ಡಬಲ್ಸ್‌ಗಾಗಿ ಪರಸ್ಪರ ಜೊತೆಯಾಗಿ ಆಡಲಿದ್ದಾರೆ.
ಪ್ರತಿಮಾ ರಾವ್ ಮತ್ತು ಶಿಲ್ಪಾ ಪುಟ್ಟರಾಜು ಶೀಘ್ರದಲ್ಲೇ ತೈಪೆ (ಅಕ್ಟೋಬರ್ 17ರಿಂದ 27), ಬ್ರೆಜಿಲ್ (ಅಕ್ಟೋಬರ್ 18-26) ಮತ್ತು ಶ್ರೀಲಂಕಾ (ನವೆಂಬರ್ 18-ಡಿಸೆಂಬರ್ 1) ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ಹಿಂದೆ ಪರಸ್ಪರ ವಿರುದ್ಧವಾಗಿ ಆಡಿರುವ ಈ ಜೋಡಿ ಟೆನಿಸ್‌ನಂತಹ ಬೇಡಿಕೆಯ ಕ್ರೀಡೆಯನ್ನು ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಕೇಳಿದಾಗ ಬೆಂಗಳೂರು ಮೂಲದ ಪ್ರತಿಮಾ ರಾವ್‌ಗೆ, ತಮ್ಮ ನ್ಯೂನತೆ ಕಂಡು ನಿರಾಕರಿಸುವವರ ಮುಂದೆ ತಾವು ಸಾಬೀತುಪಡಿಸಿ ತೋರಿಸಬೇಕೆಂಬ ತುಡಿತ. “ನನ್ನ ಅಂಗವೈಕಲ್ಯದಿಂದಾಗಿ ನಾನು ಏನನ್ನೂ ಮಾಡಲು ಸಮರ್ಥಳಲ್ಲ ಎಂದು ಜನರು ಯಾವಾಗಲೂ ನನಗೆ ಹೇಳುತ್ತಿದ್ದರು. ಆದರೆ ಜನರ ಭಾವನೆ ತಪ್ಪು ಎಂದು ನನ್ನ ಸಾಮರ್ಥ್ಯ ತೋರಿಸಬೇಕು” ಎಂಬ ಹಠ ನನಗಿದೆ ಎನ್ನುತ್ತಾರೆ.
ಇನ್ನು ಮಂಡ್ಯದವರಾದ ಶಿಲ್ಪಾ ಪುಟ್ಟರಾಜು ಆಕಸ್ಮಿಕವಾಗಿ ಟೆನಿಸ್ ಗೆ ಬಂದವರು. “ಟೆನಿಸ್ ಆಯ್ಕೆ ಮಾಡಲು ನಿರ್ದಿಷ್ಟ ಕಾರಣವಿರಲಿಲ್ಲ. ಆರಂಭದಲ್ಲಿ ನನಗೆ ಅದರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ, ಆಟವಾಡುತ್ತಾ ಅದನ್ನು ಹೆಚ್ಚೆಚ್ಚು ಇಷ್ಟಪಡಲು ಆರಂಭಿಸಿದೆ, ಈಗ ಅದರಲ್ಲೇ ಮುಂದುವರಿದಿದ್ದೇನೆ ಎನ್ನುತ್ತಾರೆ.

Leave a Reply

Your email address will not be published. Required fields are marked *

error: Content is protected !!