ಉದಯವಾಹಿನಿ , ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಹುದ್ದೆಯ ಶೀತಲ ಸಮರ ತೀವ್ರಗೊಂಡಿದೆ. ಈ ನಡುವೆ ಹರಿದ್ವಾರದಿಂದ ಬಂದ ನಾಗ ಸಾಧುಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ಆಶೀರ್ವಾದ ಪಡೆದಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಕಾಶಿಯಿಂದ ಬಂದ ನಾಗ ಸಾಧುಗಳು ಡಿಕೆಶಿ ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದರು. ಇಂದು ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಬಂದ 20ಕ್ಕೂ ಹೆಚ್ಚು ನಾಗ ಸಾಧುಗಳು ಡಿಕೆಶಿಗೆ ಆಶೀರ್ವಾದ ಮಾಡಿದ್ದಾರೆ.
ಇನ್ನೂ ಆಶೀರ್ವಾದ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಅವರು ಮನೆಯ ಬಾಗಿಲಿಗೆ ಬಂದಿದ್ರು. ಬಂದಾಗ ಅವರನ್ನ ಹೋಗಿ ಎನ್ನಲು ಆಗೋದಿಲ್ಲ, ಅವರು ಬಂದು ಆಶೀರ್ವಾದ ಮಾಡಿದ್ರು. ಯಾರಾದ್ರೂ ನಿಮ್ಮ ಮನೆಗೆ ಬಂದ್ರೆ ನೀವೂ ಹಾಗೇ ಕಳಿಸ್ತೀರಾ? ಹಾಗೆ ಧಾರ್ಮಿಕತೆಯಲ್ಲಿ ಬಂದಿದ್ರು, ಬಂದವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡೆ ಎಂದರು.
ನಾಗ ಸಾಧುಗಳು ಎಂದರೆ ಯಾರು?
ನಾಗ ಸಾಧುಗಳ ಲೋಕವೇ ಚಿತ್ರ ವಿಚಿತ್ರ. ಅವರು ನಮಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರನ್ನು ನಾವು ಧಾರ್ಮಿಕ ಯಾತ್ರೆಗಳಾದ ಮಾಹಾಕುಂಭಮೇಳ, ಕುಂಭಮೇಳದಂತಹ ಸಮಯದಲ್ಲಿ ಮಾತ್ರ ಕಾಣಬಹುದು. ಅವರಲ್ಲೂ ಅಪಾರ ದೈವಿಕ ಶಕ್ತಿಯಿರುತ್ತದೆ ಎಂಬುದು ನಂಬಿಕೆ. ಅವರ ಕಟ್ಟುನಿಟ್ಟಿನ ದೈನಂದಿನ ನಿಯಮಗಳು ಮತ್ತು ಕಠಿಣವಾದ ಜೀವನ ಶೈಲಿ ಎಂತಹ ವ್ಯಕ್ತಿಯನ್ನಾದರೂ ಒಮ್ಮೆ ದಂಗಾಗಿಸುತ್ತದೆ. ದೂರದಿಂದ ಅಥವಾ ಹೊರಗಡೆಯಿಂದ ನೋಡುವಾಗ ಅವರು ಅಸ್ಠವ್ಯಸ್ಥವಾದ ಕೂದಲನ್ನು ಹೊಂದಿರುವಂತೆ, ಶಿಸ್ತನ್ನು ಮರೆತಂತೆ ಕಂಡರೂ ಅವರು ಮಾಡುವ ಪ್ರತಿಯೊಂದು ಕೆಲಸವೂ ವ್ಯವಸ್ಥಿತವಾಗಿ ಮಾಡುತ್ತಾರೆ. ಅವರು ನಾಗ ಸಾಧುಗಳು ಎನಿಸಿಕೊಳ್ಳಬೇಕಾದರೆ ಕಠಿಣವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾಗಾ ಸಾಧುಗಳಿಗೆ ದೀಕ್ಷೆ ನೀಡಿದ ನಂತರ ಅವರನ್ನು ವಿಶೇಷ ವರ್ಗದಲ್ಲಿ ಇರಿಸಲಾಗುತ್ತದೆ.
