ಉದಯವಾಹಿನಿ, ಕಾನ್ಪುರ: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ ಇದೇ ರೀತಿಯ ಆರೋಪವೊಂದು ಕೇಳಿಬಂದಿದೆ. ವರದಕ್ಷಿಣೆಗಾಗಿ ಅತ್ತೆ-ಮಾವ ವಿಷಪೂರಿತ ಹಾವನ್ನು ಇದ್ದ ಕೋಣೆಯಲ್ಲಿ ಸೊಸೆಯನ್ನು ಕೂಡಿ ಹಾಕಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೇಳಿಬಂದಿದೆ. ವರದಕ್ಷಿಣೆ ತಂದಿಲ್ಲವೆಂದು ಅತ್ತೆ-ಮಾವ ತನ್ನ ಕೊಲೆಗೆ ಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ವಿಷಪೂರಿತ ಸರ್ಪವು ಮಹಿಳೆಗೆ ಕಚ್ಚಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ, ವರದಿಯ ಪ್ರಕಾರ, ಸೆಪ್ಟೆಂಬರ್ 18 ರಂದು ಕೋಣೆಯಲ್ಲಿ ಹಾವನ್ನು ಬಿಡಲಾಗಿತ್ತು. ನಂತರ ಮಹಿಳೆಯನ್ನು ಅದೇ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಹಾವು ಕಡಿತಕ್ಕೊಳಗಾದ ನಂತರ, ಮಹಿಳೆಯು ತನ್ನ ಅಕ್ಕನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕಾಗಿಮಿಸಿದ ಅವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಹಾವು ಕಚ್ಚಿದ ಬಗ್ಗೆ ತನ್ನ ಅತ್ತೆ-ಮಾವಂದಿರಿಗೆ ತಿಳಿಸಿದ್ದೆ. ಆದರೆ, ಹಲವಾರು ಬಾರಿ ಮನವಿ ಮಾಡಿದರೂ ಅವರು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ಮಹಿಳೆ ನೋವಿನಿಂದ ಅಳುತ್ತಿದ್ದರೆ, ಆಕೆಯ ಅತ್ತೆ-ಮಾವ ಹೊರಗೆ ನಿಂತು ನಗುತ್ತಿದ್ದರು ಎಂದು ಆಕೆಯ ಸಹೋದರಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
