ಉದಯವಾಹಿನಿ, ಬಾಗಲಕೋಟೆ: ಸುರಿದ ನಿರಂತರ ಮಳೆಗೆ ಮನೆಯ ತಗಡಿನ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಡೆದಿದೆ.ನಾಗಪ್ಪ ಲಾತೂರ್ ಮಗ ದರ್ಶನ್ ಲಾತೂರ್ (11) ಮೃತ ಬಾಲಕ. ಘಟನೆಯಲ್ಲಿ ಇನ್ನೊಬ್ಬ ಬಾಲಕ ಶ್ರೀಶೈಲ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದೆ.
ಮನೆಯಲ್ಲಿ ಕೋಣೆಯೊಂದರಲ್ಲಿ ಮಕ್ಕಳು ತಾಯಿಯೊಂದಿಗೆ ಮಲಗಿದ್ದರು. ಬೆಳಗ್ಗೆ ತಾಯಿ ಎದ್ದು ಬೇರೆ ಕೊಠಡಿಗೆ ಬರುತ್ತಲೇ ಮನೆಯ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
