ಉದಯವಾಹಿನಿ, ದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಭಿನ್ನ-ವಿಭಿನ್ನ ವಿಡಿಯೊಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ಖಂಡಿತ ನಿಮ್ಮ ಮನಗೆಲ್ಲುವುದರಲ್ಲಿ ಸಂಶಯವಿಲ್ಲ. ಹೌದು, 4 ವರ್ಷದ ಬಾಲಕನ ಸರಳ ಮತ್ತು ಹೃತ್ಪೂರ್ವಕ ರಾಷ್ಟ್ರಗೀತೆಯು ದೇಶದ ಗಮನ ಸೆಳೆದಿದೆ. ವಯಸ್ಸು ಕೇವಲ ನಾಲ್ಕು ಆಗಿದ್ದರೂ ಜೋಶ್ ಜೆರೆಮಿಯಾ ಎಂಬ ಪುಟ್ಟ ಪೋರ, ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ.
ಬಾಲಕ ಜೋಶ್ ಹೆಮ್ಮೆಯಿಂದ ನಿಂತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಅವನ ಸಣ್ಣ ಧ್ವನಿಯಲ್ಲಿ ಮುಗ್ಧತೆಯಿದ್ದು, ರಾಷ್ಟ್ರಗೀತೆಯನ್ನು ಶುದ್ಧ ಪ್ರಾಮಾಣಿಕತೆಯಿಂದ ಪಠಿಸಿದ್ದಾನೆ. ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೊಗೆ, ನನಗೆ ಕೇವಲ 4 ವರ್ಷ, ನಾನು ನಮ್ಮ ರಾಷ್ಟ್ರಗೀತೆಯನ್ನು ಹಾಡಲು ಇಷ್ಟಪಡುತ್ತೇನೆ. ಅದರ ಮೇಲಿನ ನನ್ನ ಪ್ರೀತಿ 2025ರ ಸ್ವಾತಂತ್ರ್ಯ ದಿನದಂದು ಪ್ರಾರಂಭವಾಯಿತು. ಅಂದಿನಿಂದ ನನ್ನ ಉತ್ಸಾಹ ಕಡಿಮೆಯಾಗಿಲ್ಲ. ದಯವಿಟ್ಟು ನನ್ನ ಸಣ್ಣ ತಪ್ಪುಗಳನ್ನು ನಿರ್ಲಕ್ಷಿಸಿ, ಇದೆಲ್ಲವೂ ಹೃದಯದಿಂದ ಬಂದದ್ದು ಎಂದು ಕ್ಯಾಪ್ಶನ್‌ ನೀಡಲಾಗಿದೆ.
ಪುಟ್ಟ ಪೋರನ ಮುದ್ದಾದ ರಾಷ್ಟ್ರಗೀತೆ ಗಾಯನವು ನೆಟ್ಟಿಗರ ಹೃದಯ ಗೆದ್ದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕಮೆಂಟ್‌ ವಿಭಾಗವನ್ನು ಪ್ರಶಂಸೆ ಮತ್ತು ಮೆಚ್ಚುಗೆಯಿಂದ ತುಂಬಿಸಿದ್ದಾರೆ. ಅನೇಕ ಬಳಕೆದಾರರು ಬಾಲಕನ ಹಾಡನ್ನು ಶ್ಲಾಘಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅಂತಹ ಆಳವಾದ ದೇಶಭಕ್ತಿಯ ಪ್ರಜ್ಞೆಯನ್ನು ಪೋಷಿಸಿದ್ದಕ್ಕಾಗಿ ಅವನ ಪೋಷಕರನ್ನು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!