ಉದಯವಾಹಿನಿ, ನವದೆಹಲಿ: ಫಾಸ್ಟ್‌ಟ್ಯಾಗ್‌ ಇಲ್ಲದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಫಾಸ್ಟ್‌ಟ್ಯಾಗ್‌ ಸಂಬಂಧಿಸಿದಂತೆ ಹೊಸ ಆದೇಶ ಜಾರಿ ಮಾಡಿದೆ. ದೇಶದ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದಿದ್ದರೂ ನೀವಿನ್ನು ದುಪ್ಪಟ್ಟು ದಂಡದ ಭೀತಿ ಇಲ್ಲದೇ ಸಂಚರಿಸಬಹುದಾಗಿದ್ದು, ನವೆಂಬರ್ 15ರಿಂದ ಫಾಸ್ಟ್‌ಟ್ಯಾಗ್‌ನ ನೂತನ ಟೋಲ್ ನಿಯಮ ಜಾರಿ ಆಗಲಿದೆ. ನೀವು ಟೋಲ್‌ ಇರುವ ಹೆದ್ದಾರಿಯಲ್ಲಿ ಚಲಿಸುತ್ತೀರಾ ಎನ್ನುವುದಾದ್ದರೆ ಈ ಮಾಹಿತಿ ನಿಮಗೆ ಉಪಯೋಗವಾಗಲಿದ್ದು, ತಪ್ಪದೇ ಈ ಸುದ್ದಿ ಓದಿ.

ಹೌದು ಈ ಹಿಂದೆ ಕಾರು ಹಾಗೂ ಇನ್ನಿತರ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಸಲ್ಲವೆಂದಾದಲ್ಲಿ ಡಬಲ್ ಹಣ ಪಾವತಿ ಮಾಡಬೇಕಾಗಿತ್ತು. ಫಾಸ್ಟ್‌ಟ್ಯಾಗ್‌ ಇಲ್ಲದವರಿಗೆ ಈ ನಿಯಮ ತಲೆ ನೋವಾಗಿದ್ದಲ್ಲದೇ ಜೇಬಿಗೂ ಕತ್ತರಿ ಹಾಕುವಂತಿತ್ತು. ಅಲ್ಲದೇ ಫಾಸ್ಟ್‌ಟ್ಯಾಗ್‌ ಇರುವ ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನ ಸಂಚರಿಸಿದಾಗ ಡಬಲ್ ಹಣ ಪಾವತಿ ಮಾಡಲೇಬೇಕು ಎಂದು ಟೋಲ್ ಕಂಪನಿಗಳು ನಾಮಫಲಕ ಅಳವಡಿಸಿದ್ದರು. ಆದರೀಗ ಈ ದುಪ್ಪಟ್ಟು ದಂಡದ ಬಿಸಿ ಕಡಿಮೆ ಆಗಿದ್ದು, ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಇಲ್ಲದವರು ದುಪ್ಪಟ್ಟು ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ಸಡಿಲಿಸಿದೆ. ಆದರೆ ಈ ನಿಯಮ ಯುಪಿಐ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದ್ದು, ಡಿಜಿಟಲ್‌ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಈ ನಿಯಮವನ್ನು ಜಾರಿ ಮಾಡಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿದ್ದು, ಫಾಸ್ಟ್‌ಟ್ಯಾಗ್‌ ಇಲ್ಲದ ಬಳಕೆದಾರರಿಗೆ ಅವರ ಪಾವತಿ ವಿಧಾನವನ್ನು ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಿದೆ. ಇದರಿಂದ ಡಿಜಿಟಲ್ ವಹಿವಾಟು ಉತ್ತೇಜಿಸುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ನಗದು ಬಳಕೆಯನ್ನು ಕಡಿಮೆ ಮಾಡುವುದೇ ಉದ್ದೇಶವಾಗಿದೆ.

Leave a Reply

Your email address will not be published. Required fields are marked *

error: Content is protected !!