ಉದಯವಾಹಿನಿ, ಗುವಾಹಟಿ: ಕಳೆದ ತಿಂಗಳು ಸಿಂಗಾಪುರದಲ್ಲಿ ನಡೆದ ಖ್ಯಾತ ಗಾಯಕ ಜುಬೀನ್ ಗರ್ಗ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಗ್ ಸೋದರಸಂಬಂಧಿ, ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಯಲ್ಲಿರುವ ಸಂದೀಪನ್ ಗರ್ಗ್‌ನನ್ನು ಬಂಧಿಸಲಾಗಿದೆ. ಜುಬೀನ್ ಗರ್ಗ್ ನಿಧನದ ವೇಳೆ ಸಂದೀಪನ್ ಗರ್ಗ್ ಅವರ ಜೊತೆಗಿದ್ದರು ಎನ್ನಲಾಗಿದೆ.
ಸಂದೀಪನ್ ಗರ್ಗ್ ಅವರನ್ನು ಕಳೆದ ಕೆಲವು ದಿನಗಳಲ್ಲಿ ಹಲವಾರು ಬಾರಿ ವಿಚಾರಣೆ ನಡೆಸಲಾಯಿತು. ಇದೀಗ ಸಂದೀಪನ್ ಗಾರ್ಗ್ರನ್ನು ಬಂಧಿಸಿದ್ದೇವೆ. ಪ್ರಕರಣದ ಸಂಬಂಧ ನಾವು ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸಿಐಡಿ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇದೀಗ ಐದನೇ ಆರೋಪಿಯ ಬಂಧನವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ಭಾರತ ಉತ್ಸವದ ಮುಖ್ಯ ಸಂಘಟಕ ಶ್ಯಾಮಕಾನು ಮಹಾಂತ, ಗಾಯಕನ ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ ಮತ್ತು ಅವರ ಇಬ್ಬರು ಬ್ಯಾಂಡ್‌ಮೇಟ್‌ಗಳಾದ ಶೇಖರ್ ಜ್ಯೋತಿ ಗೋಸ್ವಾಮಿ ಮತ್ತು ಅಮೃತ್ ಪ್ರಭಾ ಮಹಾಂತರನ್ನ ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳೆಲ್ಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ತನಿಖೆ ವೇಳೆ ಶೇಖರ್ ಜ್ಯೋತಿ ಗೋಸ್ವಾಮಿ, ಸಿಂಗಾಪುರದಲ್ಲಿ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಮತ್ತು ಶ್ಯಾಮಕಾನು ಮಹಾಂತ ಸೇರಿ ಜುಬೀನ್‌ಗೆ ವಿಷಪ್ರಾಶನ ಮಾಡಿದ್ದಾರೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!