ಉದಯವಾಹಿನಿ, ಚಂಡೀಗಢ: ಪಂಜಾಬ್‌ನ ರೋಪರ್ ರೇಂಜ್‌ನಲ್ಲಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕಗೊಂಡ ಹಿರಿಯ ಐಪಿಎಸ್ ಅಧಿಕಾರಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಐಪಿಎಸ್ ಅಧಿಕಾರಿ ಮನೆಯಿಂದ 5 ಕೋಟಿ ರೂ. ನಗದು, ಮರ್ಸಿಡಿಸ್, ಆಡಿ ಕಾರು ವಶಕ್ಕೆ ಪಡೆದಿದ್ದಾರೆ.
8ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ತನಿಖೆ ವೇಳೆ ಸಿಬಿಐಗೆ ಶಾಕ್‌ ಎದುರಾಗಿದೆ. ಐಪಿಎಸ್‌ ಅಧಿಕಾರಿ ಮನೆಯಲ್ಲಿ 5 ಕೋಟಿ ರೂ. ನಗದು, ಐಷಾರಾಮಿ ವಾಹನಗಳು, ಆಭರಣಗಳು ಮತ್ತು ಉನ್ನತ ದರ್ಜೆಯ ವಾಚ್‌ಗಳು ಸೇರಿದಂತೆ ಅಪಾರ ಸಂಪತ್ತು ಪತ್ತೆಯಾಗಿದೆ.
2009 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಿಐಜಿ ಹರ್‌ಚರಣ್ ಸಿಂಗ್ ಭುಲ್ಲರ್ ಮತ್ತು ಅವರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಕೃಷ್ಣ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಸ್ಥಳೀಯ ಉದ್ಯಮಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಇತ್ಯರ್ಥಗೊಳಿಸಲು, ಹರ್‌ಚರಣ್‌ ಈ ಮಧ್ಯವರ್ತಿಯ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಸಿಬಿಐ ತಿಳಿಸಿದೆ. ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿರುವ ಆಕಾಶ್ ಬಟ್ಟಾ ಎಂಬ ವ್ಯಾಪಾರಿ ಐದು ದಿನಗಳ ಹಿಂದೆ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಸಿಬಿಐ ಈ ಪ್ರಕರಣ ದಾಖಲಿಸಿತ್ತು. ಡಿಐಜಿ ಭುಲ್ಲರ್ ಅವರು ಆರಂಭಿಕ ಲಂಚವಾಗಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಇತ್ಯರ್ಥಗೊಳಿಸಿದ ನಂತರ ಉಳಿದ ಹಣ ನೀಡದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರೆಂದು ದೂರಲಾಗಿತ್ತು.

Leave a Reply

Your email address will not be published. Required fields are marked *

error: Content is protected !!