ಉದಯವಾಹಿನಿ, ಗಾಂಧಿನಗರ: ಅಚ್ಚರಿಯ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲಾ 16 ಸಚಿವರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ (BJP) ಪಕ್ಷವು ಎಲ್ಲಾ 16 ಸಚಿವರ ರಾಜೀನಾಮೆಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.ಶುಕ್ರವಾರ ಬೆಳಿಗ್ಗೆ 11:30 ಕ್ಕೆ ಭೂಪೇಂದ್ರ ಪಟೇಲ್ ಅವರ ಸಚಿವ ಸಂಪುಟ ಪುನರ್‌ಚನೆ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿ ಸಚಿವರಿಂದ ರಾಜೀನಾಮೆಗಳನ್ನು ತೆಗೆದುಕೊಳ್ಳಲಾಗಿದೆ.
ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ರಾಜ್ಯಪಾಲ ಆಚಾರ್ಯ ದೇವವ್ರತ್‌ಜಿ ಅವರು ಸಂಪುಟದ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಗುಜರಾತ್ ಸಚಿವ ಸಂಪುಟದಲ್ಲಿ ಸಿಎಂ ಪಟೇಲ್ ಸೇರಿದಂತೆ 17 ಮಂದಿ ಸಚಿವರಿದ್ದರು. ಇವರಲ್ಲಿ ಎಂಟು ಮಂದಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಾಗಿದ್ದರೆ, ಇತರರು ರಾಜ್ಯ ಸಚಿವರಾಗಿದ್ದರು.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬುಡಕಟ್ಟು ಶಾಸಕರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲು ಬಿಜೆಪಿ ಮುಂದಾಗಿದೆ. ಆಪ್ ಬುಡಕಟ್ಟು ಜನರನ್ನು ಸೆಳೆಯುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.ಹೊಸ ಸಂಪುಟವು 23 ಸದಸ್ಯರನ್ನು ಹೊಂದುವ ಸಾಧ್ಯತೆಯಿದೆ. ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಮಾಡಿ ಹೊಸ ಸಂಪುಟ ರಚನೆಗೆ ಬಿಜೆಪಿ ಈಗ ಕೈಹಾಕಿದೆ. 182 ಸದಸ್ಯರ ವಿಧಾನಸಭೆಯನ್ನು ಹೊಂದಿರುವ ಗುಜರಾತ್‌ನಲ್ಲಿ ಗರಿಷ್ಠ 27 ಮಂತ್ರಿಗಳಿರಬಹುದು. ಹೊಸ ಸಂಪುಟದಲ್ಲಿ ಯುವ ಮತ್ತು ಮಹಿಳಾ ನಾಯಕಿಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುವ ಸಾಧ್ಯತೆಯಿದೆ.
