ಉದಯವಾಹಿನಿ, ಮಡಿಕೇರಿ: ಕರುನಾಡ ಜೀವನದಿ ಎಂದೇ ಜನಮಾನಸದಲ್ಲಿ ಬೇರೂರಿರುವ, ತಮಿಳುನಾಡಿನ ರೈತರಿಗೂ ಸಂಜೀವಿನಿಯಾಗಿರುವ ಕಾವೇರಿ ನದಿಗೆ ಒಡಲಲ್ಲೇ ಕಂಟಕ ಎದುರಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಜನಿಸೋ ಈ ಜೀವದಾತೆ ಕರುನಾಡ ಜನರ ಪಾಲಿಗೆ ವರಪ್ರದಾಯಿನಿ. ಕೇವಲ ಕುಡಿಯೋಕೆ ಮಾತ್ರವಲ್ಲದೇ ಕೃಷಿಗೂ ನೀರು ಹರಿಸುವ ಮೂಲಕ ರೈತರ ಪಾಲಿಗೆ ದೇವತೆಯಾಗಿದ್ದಾಳೆ ಕಾವೇರಿ. ಕಾವೇರಿ ನದಿಯ ಮಹತ್ವ ಬೆಂಗಳೂರಿಗರಿಗೆ ಚೆನ್ನಾಗಿ ಗೊತ್ತಿದೆ. ರಾಜಧಾನಿಯ ಜನರಿಗೆ ಬಹುತೇಕ ಸಪ್ಲೈ ಆಗೋದು ಇದೇ ಕಾವೇರಿ ನದಿಯ ನೀರೇ. ಹೀಗೆ ಕೋಟ್ಯಂತರ ಜನರ ಪಾಲಿನ ಸಂಜೀವಿನಿಯಾಗಿರೋ ಕಾವೇರಿ ನದಿ ತನ್ನ ಒಡಲಲ್ಲೇ ಕಲುಷಿತವಾಗುತ್ತಿದ್ದಾಳೆ.
ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಪಲ್ಪರ್ ನಡೆಯುತ್ತಿದ್ದು, ತ್ಯಾಜ್ಯವನ್ನ ನೇರವಾಗಿ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಕೆಲವರು ನದಿ ಅಂಚಿನಲ್ಲಿ ರೆಸ್ಟೋರೆಂಟ್, ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಿಕೊಂಡು ನೇರವಾಗಿ ಕೊಳಚೆ ನೀರನ್ನು ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಕಾವೇರಿ ದಿನನಿತ್ಯ ಕಲುಷಿತವಾಗುತ್ತಿದ್ದಾಳೆ. ಅಲ್ಲದೇ ಅಯ್ಯಪ್ಪ ಮಾಲಾಧಾರಿಗಳು ನದಿಯಲ್ಲಿ ಸ್ನಾನ ಮಾಡಿದ್ರೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
