ಉದಯವಾಹಿನಿ, ಬೆಂಗಳೂರು: ಆಸ್ತಿ ನೋಂದಣಿ ನಂತರ ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗಬೇಕು ಎಂಬ ನಿಟ್ಟಿನಲ್ಲಿ ಆಟೋ ಮ್ಯುಟೇಶನ್ ವ್ಯವಸ್ಥೆ ಜಾರಿಗೆ ತಂದಿದ್ದು, ಪ್ರಸ್ತುತ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷನ್ ಪ್ರಶ್ಮೋತ್ತರ ಕಲಾಪದಲ್ಲಿ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ವಿಳಂಬವಾಗುತ್ತಿದೆ ಎಂಬ ಬಗ್ಗೆ ದೂರು ಇದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಎರಡು ಹಂತದಲ್ಲಿ ಸುಧಾರಣೆಗಳನ್ನು ತರಲಾಗಿದೆ. ಮೊದಲ ಹಂತದಲ್ಲಿ ಕಳೆದ ವರ್ಷ ಒಟ್ಟು ಖಾತೆ ಬದಲಾವಣೆ ಪೈಕಿ ಶೇ.66ರಷ್ಟು ಖಾತೆಗಳನ್ನು ಆಟೋ ಮ್ಯುಟೇಶನ್ ಮಾಡುವ ಮೂಲಕ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಜಾರಿ ಮಾಡಿದ್ದೇವೆ. ಕಳೆದ ತಿಂಗಳು ಮತ್ತೆ ಒಂದು ಹೆಜ್ಜೆ ಮುಂದಿಡಲಾಗಿದ್ದು, ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲು ಆಟೋ ಮ್ಯುಟೇಶನ್ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಪ್ರಸ್ತುತ ಖಾತೆ ಬದಲಾವಣೆ ಪೈಕಿ ಶೇ.98ರಷ್ಟು ಸ್ವಯಂ ಚಾಲಿತವಾಗಿಯೇ ಖಾತೆ ಬದಲಾವಣೆ ಆಗುತ್ತಿದೆ. ಕೆಲವು ಅರ್ಜಿ ನೀಡಿದ ಮೂರು ಗಂಟೆ, ಕೆಲವು 8ನೇ ದಿನ, ಇನ್ನೂ ಕೆಲವು 16ನೇ ದಿನ ಕಾನೂನು ಪ್ರಕಾರವಾಗಿ ಖಾತೆ ಬದಲಾವಣೆ ಆಗುತ್ತವೆ. ಈ ಬಗ್ಗೆ ತಕರಾರು ದಾಖಲಾದರೆ ಮಾತ್ರ ಖಾತೆ ಬದಲಾವಣೆ ವಿಳಂಬವಾಗುತ್ತದೆ. ಇನ್ನುಳಿದಂತೆ ಯಾರನ್ನೂ ಭೇಟಿ ಮಾಡದೆ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಈ ಸೇವೆಯನ್ನು ಪಡೆಯಬಹುದಾಗಿದ್ದು, ದೇಶದ ಇತಿಹಾಸದಲ್ಲೇ ಇದೊಂದು ಪ್ರಗತಿಪರ ಹೆಜ್ಜೆ ಎಂದು ಸಂತಸ ವ್ಯಕ್ತಪಡಿಸಿದರು. ಖಾತೆ ಬದಲಾವಣೆ ಸಂಬಂಧ ಆರ್‌ಐ (ಕಂದಾಯ ನಿರೀಕ್ಷಕರು) ಅಧಿಕಾರಿಯನ್ನು ಭೇಟಿಯಾಗದಿದ್ದರೆ ಅವರೇ ತಕರಾರು ಸಲ್ಲಿಸುತ್ತಾರೆ ಎಂಬ ಬಗೆಗಿನ ದೂರಿಗೂ ಪರಿಷತ್‌ನಲ್ಲಿ ವಿವರಣೆ ಸಚಿವರು, ಸರ್ಕಾರದ ಹಿತಾಸಕ್ರಿ ಇದ್ದರೆ ಮಾತ್ರ ಆರ್‌ಐ ತಕರಾರು ಸಲ್ಲಿಸಬಹುದು. ಖಾಸಗಿ ಸ್ವತ್ತಿನ ತಕರಾರು ಅವರ ಬಂಧುಗಳೇ ಹಾಕಬೇಕೆ ವಿನಃ ಆರ್‌ಐ ಹಾಕುವಂತಿಲ್ಲ. ಈ ಹಿಂದೆ ಇದ್ದ ಈ ವ್ಯವಸ್ಥೆಯನ್ನು ಇದೀಗ ಬಂದ್ ಮಾಡಿದ್ದೇವೆ. ಆರ್‌ಐ ತಮ್ಮ ಕಡೆಯವರಿಂದ ತಕರಾರು ಹಾಕುತ್ತಿದ್ದಾರೆ ಎಂಬ ಬಗ್ಗೆಯೂ ಆರೋಪ ಇತ್ತು. ಹೀಗಾಗಿ ತಕರಾರು ಹಾಕುವವರಿಗೆ ಆಧಾರ್ ಇಕೆವೈಸಿಯನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಒಂದೇ ವ್ಯಕ್ತಿ ಮೂರು ನಾಲ್ಕು ತಕರಾರು ಅರ್ಜಿ ಹಾಕಿದ್ರೆ ಆತನನ್ನು ಪ್ರಶ್ನೆ ಮಾಡಬಹುದಾಗಿದೆ. ಇಂತಹ ಪ್ರಗತಿಪರ ಬದಲಾವಣೆಗಳ ಮೂಲಕ ಇಲಾಖೆಯಲ್ಲಿ ಸುಧಾರಣೆ ತಂದು ಮೂಗರ್ಜಿ ತಕರಾರುಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದೇವೆ. ಪರಿಣಾಮ ತಳಮಟ್ಟದಲ್ಲಿ ಸುಧಾರಣೆಯನ್ನೂ ಕಾಣಲಾಗುತ್ತಿದೆ ಎಂದು ವಿವರಿಸಿದರು.
