ಉದಯವಾಹಿನಿ, ರಾಯಚೂರು: ಕುಡಿಯುವ ನೀರಿನ ಕಾಮಗಾರಿಗೆ ಬಳಸಿದ ಸಾಮಗ್ರಿಗಳ 6.02 ಲಕ್ಷ ರೂ. ಬಿಲ್ ಪಾವತಿ ಬಾಕಿಯಿರುವ ಹಿನ್ನೆಲೆ ಜಿಲ್ಲೆಯ ಮಾನ್ವಿ ತಾಲೂಕು ಪಂಚಾಯಿತಿ ಕಚೇರಿಯ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.
ಮಾನ್ವಿ ತಾಲೂಕಿನ ಪೊತ್ನಾಳದ ಬಾಲಾಜಿ ಹಾರ್ಡ್ವೇರ್ ಅಂಗಡಿ ಮಾಲೀಕ ರಾಮಕೃಷ್ಣ ಅವರಿಗೆ 2022ರಿಂದ 6.02 ಲಕ್ಷ ರೂ. ಬಿಲ್ ನೀಡದೇ ಉಟಕನೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸತಾಯಿಸುತ್ತಿದ್ದರು. ಈ ಹಿನ್ನೆಲೆ ರಾಮಕೃಷ್ಣ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ ಕಚೇರಿಯಲ್ಲಿರುವ ವಸ್ತುಗಳನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು. ಅದರಂತೆ ನವೆಂಬರ್ ತಿಂಗಳಲ್ಲಿ ಉಟಕನೂರು ಗ್ರಾ.ಪಂ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿತ್ತು.
ನ್ಯಾಯಾಲಯದ ಆದೇಶದ ಬಳಿಕವು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಬಿಲ್ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆ ಸದ್ಯ ತಾ.ಪಂ ಕಚೇರಿಯಲ್ಲಿರುವ ಕಂಪ್ಯೂಟರ್, ಚೇರ್, ಟೇಬಲ್ ಸೇರಿ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಸದ್ಯ ಎಲ್ಲಾ ವಸ್ತುಗಳನ್ನು ಕೋರ್ಟ್‌ಗೆ ಒಪ್ಪಿಸಲು ಮುಂದಾಗಿದ್ದಾರೆ.ಜಪ್ತಿ ವೇಳೆ ಹಾರ್ಡ್‌ವೇರ್ ಅಂಗಡಿ ಮಾಲೀಕ ರಾಮಕೃಷ್ಣ ಪರ ವಕೀಲ ಹಾಗೂ ಸರ್ಕಾರಿ ವಕೀಲರ ನಡುವೆ ಜಟಾಪಟಿ ನಡೆಯಿತು.
