ಉದಯವಾಹಿನಿ, ಚಿಕ್ಕಮಗಳೂರು: ನಗರದಲ್ಲಿ ನಡೆದಿದ್ದ ಬಾರ್‌ ಮಾಲೀಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಲ್ಕತ್ತಾ ಮೂಲದ ರುದ್ರ, ಆಂಧ್ರ ಪ್ರದೇಶದ ಅದೋನಿಯ ವೀರ ಶೇಖರ್, ತುಮಕೂರಿನ ವಿನಿ ಹಾಗೂ ಸ್ಥಳೀಯ ನಿವಾಸಿ ಹನುಮಂತ ಎಂದು ಗುರುತಿಸಲಾಗಿದೆ. ಇವರೆಲ್ಲ ಸೇರಿ ಜ.20 ರಂದು ನಗರದ ಬಾರ್‌ ಒಂದರ ಮಾಲೀಕರಾದ ತೇಜಸ್ವಿಯವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದರು. ಪ್ರಜ್ಞೆ ತಪ್ಪಿದ ಬಳಿಕ 1 ಕಿಲೋ ಮೀಟರ್‌ ದೂರದ ಬಯಲಲ್ಲಿ ಎಸೆದು ಹೋಗಿದ್ದರು.
ಆಟೋ ಚಾಲಕರೊಬ್ಬರು ಜ.21ರ ಬೆಳಗ್ಗೆ ತೇಜಸ್ವಿಯವರನ್ನು ನೋಡಿ, ಉಸಿರಾಡುತ್ತಿದ್ದಿದ್ದನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಈ ಸಂಬಂಧ ಮೃತರ ಸಹೋದರ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣದ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ನಾವೇ ಕೊಲೆ ಮಾಡಿದ್ದು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

Leave a Reply

Your email address will not be published. Required fields are marked *

error: Content is protected !!