ಉದಯವಾಹಿನಿ, ಬೆಂಗಳೂರು: ಜಂಟಿ ಅಧಿವೇಶದಲ್ಲಿ ರಾಜ್ಯಪಾಲರು ಮಾಡಿದ ಒಂದು ನಿಮಿಷದ ಭಾಷಣ ವಿಧಾನಸಭೆಯಲ್ಲಿ ಸದ್ದು ಮಾಡಿ ಗದ್ದಲ, ಕೋಲಾಹಲ ಸೃಷ್ಟಿಸಿತ್ತು. ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ, ಟೀಕೆ ನಿಂದನೆಗೂ ವೇದಿಕೆ ಒದಗಿಸಿತ್ತು.
ಕಲಾಪ ಆರಂಭವಾದಾಗ ವಿಪಕ್ಷ ನಾಯಕ ಆರ್ ಅಶೋಕ್ ಮಾತಾಡಿ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ಅಗೌರವ ತೋರಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಆಗಬೇಕು. ನಮ್ಮ 18 ಶಾಸಕರು ಸ್ಪೀಕರ್ ಪೀಠಕ್ಕೆ ಅಗೌರವ ಮಾಡಿದ್ದಾರೆ ಎಂದು ಅಮಾನತು ಮಾಡಲಾಗಿತ್ತು. ಈಗ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಏನು ಕ್ರಮ? ಈ ಸಂಬಂಧ ಸ್ಪೀಕರ್ ರೂಲಿಂಗ್ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರು ವಿವೇಚನೆಯಿಂದಲೇ ಭಾಷಣ ಮಾಡಿದ್ದಾರೆ. ಆದರೆ ಹೆಚ್‌ಕೆ ಪಾಟೀಲ್‌ರು ರಾಜ್ಯಪಾಲರಿಗೆ ಓಡಿ ಹೋದರು ಅಂದಿದ್ದು ಸರಿಯಲ್ಲ. ರಾಜ್ಯಪಾಲರು ಇದ್ದಾಗ ರಾಷ್ಟ್ರಗೀತೆ ಹಾಡು ಶುರುವಾಗಿದ್ದರೆ ಇರುತ್ತಿದ್ದರು ಎಂದು ಅಶೋಕ್ ಸಮರ್ಥಿಸಿಕೊಂಡರು.
ಶಾಸಕ ಅಶ್ವಥ್ ನಾರಾಯಣ, ಸುನೀಲ್ ಕುಮಾರ್ ಕೂಡಾ ರಾಜ್ಯಪಾಲರಿಗೆ ಅಗೌರವ ತೋರಿದ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಮಾತಿನ ಭರದಲ್ಲಿ ಸುನೀಲ್ ಕುಮಾರ್ ಇದು ಗೂಂಡಾ ಸರ್ಕಾರ ಅಂದಿದ್ದು ಕಾಂಗ್ರೆಸ್‌ನವರನ್ನು ಕೆರಳಿಸಿತ್ತು, ಈವೇಳೆ ಸದನದಲ್ಲಿ ಜಟಾಪಟಿ ಮತ್ತಷ್ಟು ಹೆಚ್ಚಾಯಿತು.
