ಉದಯವಾಹಿನಿ : ಭಾರತದ ವಿರುದ್ಧ ಸದಾ ಕೇಡು ಬಯಸುವ ಕುತಂತ್ರಿ ಪಾಕಿಸ್ತಾನ ಟಿ20 ವಿಶ್ವಕಪ್ ವಿಚಾರದಲ್ಲಿ ಮತ್ತೆ ತಗಾದೆ ಎತ್ತಿದೆ. 2026ರ ಟಿ 20 ವಿಶ್ವಕಪ್ ಗ್ರೂಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ ಒಂದು ದಿನದ ನಂತರ, ಪಾಕಿಸ್ತಾನ ಕೂಡ ಟೂರ್ನಿಯನ್ನು ಬಹಿಷ್ಕರಿಸುವ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಜಿಯೋ ನ್ಯೂಸ್ ಪ್ರಕಾರ, ಬಾಂಗ್ಲಾದೇಶ ತನ್ನ ನಿಲುವಿಗೆ ಅಂಟಿಕೊಂಡು ಭಾಗವಹಿಸದಿರಲು ನಿರ್ಧರಿಸಿದರೆ ಪಾಕಿಸ್ತಾನ ಪಂದ್ಯಾವಳಿಯನ್ನು ಬಹಿಷ್ಕರಿಸಬಹುದು ಎಂದು ತಿಳಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಮೂಲಗಳನ್ನು ಉಲ್ಲೇಖಿಸಿ ಟೆಲಿಕಾಂ ಏಷ್ಯಾ ಈ ಹಿಂದೆ ಉಲ್ಲೇಖಿಸಿರುವಂತೆ ಸಂಘರ್ಷದ ವರದಿಗಳು ಹೊರಬರುತ್ತಿವೆ.”ಭಾರತದ ಒತ್ತಾಯದ ಮೇರೆಗೆ, ಅವರ ಪಂದ್ಯಗಳನ್ನು ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರಿಸಲಾಯಿತು, ಆದರೆ ಬಾಂಗ್ಲಾದೇಶ ಅದೇ ಕಾರಣವನ್ನು ಸ್ವೀಕರಿಸಲಿಲ್ಲ, ಇದು ನಿರಾಶಾದಾಯಕವಾಗಿದೆ” ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಬಾಂಗ್ಲಾದೇಶ ತಂಡ ಭಾರತದಲ್ಲಿ ಆಡಲು ಹಿಂದೇಟು ಹಾಕುತ್ತಿರುವಲ್ಲಿ ಪಾಕಿಸ್ತಾನದ ಕೈವಾಡ ಇರುವುದಾಗಿಯೂ ವರದಿಗಳು ಹೇಳಿವೆ. ಪಾಕ್ ಬೆಂಬಲದಿಂದಲೇ ಬಾಂಗ್ಲಾ ಈ ರೀತಿಯ ಬೇಡಿಕೆ ಇಡುತ್ತಿದೆ ಎನ್ನಲಾಗಿದೆ. ಐಸಿಸಿ ಮಂಡಳಿಯು ಬಿಸಿಬಿಯ ಕೋರಿಕೆಯ ವಿರುದ್ಧ ಮತ ಚಲಾಯಿಸಿತು. ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬದಲಾಯಿಸಲಾಗುವುದಿಲ್ಲ ಎಂದು ಹೇಳಿದೆ.
