ಉದಯವಾಹಿನಿ : ಪ್ರತಿ ಬೆಳಿಗ್ಗೆ ಬೆಂಗಳೂರಿನ ಟಿಫಿನ್ ಸೆಂಟರ್‌ಗಳು, ಕಚೇರಿ ಕ್ಯಾಂಟೀನ್‌ಗಳು ಮತ್ತು ಮನೆ ಅಡುಗೆಮನೆಗಳಿಂದ ಬರುವ ಬಿಸಿಬಿಸಿ ಇಡ್ಲಿಗಳ ಪರಿಮಳವೇ ಬೇರೆ. ಮೃದುವಾದ ಇಡ್ಲಿಗಳ ಮೇಲೊಂದು ತೊಟ್ಟು ತುಪ್ಪ ಮತ್ತು ಗೋಡಂಬಿಯ ಅಲಂಕಾರ ಹೊಂದಿರುವ ಚಿನ್ನದ ಬಣ್ಣದ ರವೆ ಇಡ್ಲಿಗಳೂ ಈಗ ದಕ್ಷಿಣ ಭಾರತೀಯ ಉಪಾಹಾರದ ಅವಿಭಾಜ್ಯ ಭಾಗವಾಗಿವೆ. ಆದರೆ ಈ ರವೆ ಇಡ್ಲಿಗಳ ಜನ್ಮ ಕಥೆ ಮಾತ್ರ ಅಡುಗೆಮನೆಯ ಕಲ್ಪನೆಯಿಂದಲ್ಲ, ಜಾಗತಿಕ ಸಂಕಷ್ಟದಿಂದ ಅನ್ನೋದು ನಿಮಗೆ ಗೊತ್ತಿದ್ಯಾ
ಹೌದು, ರವೆ ಇಡ್ಲಿ ಹುಟ್ಟಿದ್ದು ಯುದ್ಧದ ಹೊತ್ತಿನಲ್ಲಿ
ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಬರ್ಮಾವನ್ನು ಆಕ್ರಮಿಸಿದ ಪರಿಣಾಮ ಭಾರತಕ್ಕೆ ಬರುತ್ತಿದ್ದ ಅಕ್ಕಿ ಸರಬರಾಜು ಸಂಪೂರ್ಣವಾಗಿ ಕಡಿತಗೊಂಡಿತು. ಉಳಿದಿದ್ದ ಅಕ್ಕಿಯನ್ನು ಬ್ರಿಟಿಷ್ ಸರ್ಕಾರ ಯುರೋಪಿನ ಸೈನಿಕರು ಮತ್ತು ನಾಗರಿಕರಿಗೆ ಕಳುಹಿಸಿದ್ದರಿಂದ, ಅಕ್ಕಿಯೇ ಆಹಾರದ ಆಧಾರವಾಗಿದ್ದ ದಕ್ಷಿಣ ಭಾರತ ತೀವ್ರ ಕೊರತೆಯನ್ನು ಎದುರಿಸಬೇಕಾಯಿತು.
ಅಂತಹ ಸಂದರ್ಭದಲ್ಲೇ ಬೆಂಗಳೂರಿನ ಚಿಕ್ಕ ಕುಟುಂಬದ ಉಪಾಹಾರ ಗೃಹವಾದ ಬ್ರಾಹ್ಮನ್ ಕಾಫಿ ಕ್ಲಬ್ (ನಂತರದ ಮವಳ್ಳಿ ಟಿಫಿನ್ ರೂಮ್ಸ್ – ಹೊಸ ದಾರಿಯನ್ನು ಹುಡುಕಿತು. ಇಡ್ಲಿಗೆ ಅಕ್ಕಿ ಸಿಗದಾಗ, ಪರಿಹಾರವಾಗಿ ಕೈಸೇರಿದ್ದು ರವೆ. ಮೊಸರಿನ ಜೊತೆ ರವೆಯನ್ನು ಬೆರೆಸಿ, ತುಪ್ಪದಲ್ಲಿ ಸಾಸಿವೆ ಮತ್ತು ಗೋಡಂಬಿಯ ಒಗ್ಗರಣೆ ಹಾಕಿ, ಸಂಪ್ರದಾಯಿಕ ಇಡ್ಲಿಯಂತೆ ಆವಿಯಲ್ಲಿ ಬೇಯಿಸಿದ ಪ್ರಯೋಗ ಯಶಸ್ವಿಯಾಯಿತು.
ಆ ರವೆ ಇಡ್ಲಿ ಹಗುರ, ಮೃದುವಾಗಿಯೇ ಅಲ್ಲದೆ ತನ್ನದೇ ಆದ ರುಚಿಯಿಂದ ಜನಮನ ಗೆದ್ದಿತು. ತಾತ್ಕಾಲಿಕ ಪರ್ಯಾಯವಾಗಿ ಹುಟ್ಟಿದ ಈ ಪದಾರ್ಥ, ಕಾಲಕ್ರಮೇಣ ಸ್ವತಂತ್ರ ಗುರುತನ್ನು ಪಡೆದಿತು.
