ಉದಯವಾಹಿನಿ , ಜೈಪುರ: ಗಣರಾಜ್ಯೋತ್ಸವದ ಹಿನ್ನೆಲೆ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ವಿವಿಧೆಡೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಕಳೆದ ವರ್ಷ ಕೆಂಪುಕೋಟೆ ಸಮೀಪ ಉಂಟಾದ ಕಾರು ಬಾಂಬ್‌ ಸ್ಫೋಟದ ಬಳಿಕ ದೇಶಾದ್ಯಂತ ಜನನಿಬಿಡ ಪ್ರದೇಶಗಳಲ್ಲಿ ಅಲರ್ಟ್‌ ಮಾಡಲಾಗಿದೆ. ಆದ್ರೆ ಸೋಮವಾರ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವ ಆಚರಣೆಗೂ ಮುನ್ನವೇ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಸುಮಾರು 10,000 ಕೆಜಿ ಸ್ಫೋಟಕಗಳು ಡಿಟೋನೇಟರ್‌ಗಳು ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮ ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ರಾಜಸ್ಥಾನದ ನಾಗೌರ್ ಜಿಲ್ಲೆಯ ಪೊಲೀಸರು ತೋಟದ ಮನೆಯೊಂದರಲ್ಲಿ 10 ಸಾವಿರ ಕೆಜಿ ಸ್ಫೋಟಕಗಳು ಹಾಗೂ ಡಿಟೋನೇಟರ್‌ಗಳನ್ನ ವಶಪಡಿಸಿಕೊಂಡಿದ್ದು, ಓರ್ವನನ್ನ ಬಂಧಿಸಲಾಗಿದೆ. ಹರ್ಸೌರ್ ಗ್ರಾಮದ ನಿವಾಸಿ ಸುಲೇಮಾನ್ ಖಾನ್ ಬಂಧಿತ ಆರೋಪಿ.

ಖಚಿತ ಮಾಹಿತಿ ಮೇರೆಗೆ ರಾಜಸ್ಥಾನ ಪೊಲೀಸರು ಹರ್ಸೌರ್‌ನ ತೋಟದ ಮನೆಯೊಂದರ ಮೇಲೆ ದಾಳಿ ಮಾಡಿದಾಗ 187 ಚೀಲಗಳಲ್ಲಿ ತುಂಬಿಟ್ಟಿದ್ದ ಒಟ್ಟು 9,550 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕಗಳ ಜೊತೆಗೆ ಭಾರೀ ಪ್ರಮಾಣದ ಸ್ಫೋಟಕ ಪರಿಕರಗಳನ್ನೂ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 9 ಪೆಟ್ಟಿಗೆಗಳಲ್ಲಿ ಡಿಟೋನೇಟರ್‌ಗಳು, 12 ಪೆಟ್ಟಿಗೆ & 15 ಬಂಡಲ್‌ಗಳಷ್ಟು ನೀಲಿ ಫ್ಯೂಸ್ ವೈರ್, 12 ಪೆಟ್ಟಿಗೆ & 5 ಬಂಡಲ್‌ಗಳ ಕೆಂಪು ಫ್ಯೂಸ್ ವೈರ್ ಗಳನ್ನೂ ವಶಕ್ಕೆ ಪಡೆಯಲಾಗಿದೆ. ನಂತರ ದಾಳಿ ವೇಳೆ ಸ್ಥಳದಲ್ಲಿದ್ದ ಸುಲೇಮಾನ್ ಖಾನ್ ಎಂಬಾತನನ್ನ ಬಂಧಿಸಲಾಗಿದೆ. ಆತನ ವಿರುದ್ಧ ಮೂರು ಕ್ರಿಮಿನಲ್‌ ಪ್ರಕರಣಗಳಿವೆ.

Leave a Reply

Your email address will not be published. Required fields are marked *

error: Content is protected !!