ಉದಯವಾಹಿನಿ , ಬ್ಯಾಂಕಾಕ್ : ಕಂಬೋಡಿಯಾದೊಂದಿಗಿನ ವಿವಾದಿತ ಗಡಿ ಪ್ರದೇಶದಲ್ಲಿ ಥೈಲ್ಯಾಂಡ್ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ್ದು, ಇದಕ್ಕೆ ಕಂಬೋಡಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸ್ಥಳೀಯರಲ್ಲಿ ಧಾರ್ಮಿಕ ಭಾವನೆ ಮತ್ತು ನೈತಿಕತೆಯನ್ನು ಹೆಚ್ಚಿಸುವ ಕ್ರಮವಾಗಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಥೈಲ್ಯಾಂಡ್ ಸೇನೆ ಹೇಳಿದೆ. ವಿವಾದಿತ ಪ್ರದೇಶವನ್ನು ಥೈಲ್ಯಾಂಡ್ ‘ಆನ್ ಮಾ’ ಎಂದು ಹೆಸರಿಸಿದ್ದರೆ, ಕಂಬೋಡಿಯಾ ‘ಆನ್ ಸೆಸ್ ಎಂದು ಕರೆಯುತ್ತದೆ. ಎರಡೂ ದೇಶಗಳ ನಡುವೆ ದೀರ್ಘಕಾಲದ ಪ್ರಾದೇಶಿಕ ವಿವಾದದ ಕೇಂದ್ರವಾಗಿರುವ ಈ ಸ್ಥಳದಿಂದ ಕಳೆದ ತಿಂಗಳು ಥೈಲ್ಯಾಂಡ್ ಪಡೆ ವಿಷ್ಣುವಿನ ಪ್ರತಿಮೆಯನ್ನು ತೆರವುಗೊಳಿಸಿದ್ದು, ಇದನ್ನು ಕಂಬೋಡಿಯಾ ಟೀಕಿಸಿತ್ತು. ಥೈಲ್ಯಾಂಡ್ ಮತ್ತು ಕಂಬೋಡಿಯಾ ಎರಡೂ ಪ್ರಧಾನವಾಗಿ ಬೌದ್ಧ ರಾಷ್ಟ್ರಗಳಾಗಿವೆ.
