ಉದಯವಾಹಿನಿ , ಕಾಂಗೊ: ಐಎಸ್ಐಎಲ್ ಜೊತೆ ಸಂಪರ್ಕ ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಉಗ್ರಗಾಮಿ ಗುಂಪು ಎಡಿಎಫ್ ನಡೆಸಿರುವ ದಾಳಿಯಿಂದ 25 ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವ ಕಾಂಗೋದಲ್ಲಿ ನಡೆದಿದೆ. ಉಗಾಂಡಾ ಮತ್ತು ಡಿಆರ್ ಕಾಂಗೊ ನಡುವಿನ ಗಡಿ ಪ್ರದೇಶದಲ್ಲಿ ನಾಗರಿಕರ ಮೇಲೆ ಈ ದಾಳಿ ನಡೆಸಿದೆ. ಎಡಿಎಫ್ ನಿರಂತರವಾಗಿ ನಾಗರಿಕರ ಮೇಲೆ ದಾಳಿಯನ್ನು ನಡೆಸುತ್ತಿದೆ. ಕ್ಯಾರಿಟಾಸ್ ಚಾರಿಟಿ ನಡೆಸುತ್ತಿರುವ ಚರ್ಚ್‌ನಲ್ಲಿ ಕ್ಯಾಥೋಲಿಕ್ ಕ್ರೈಸ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾಗ ಈ ದಾಳಿ ನಡೆದಿದ್ದು, ಹಲವಾರು ಮನೆ, ಅಂಗಡಿಗಳು ಸುಟ್ಟು ಹೋಗಿವೆ. ದಾಳಿಯ ಬಳಿಕ ಅನೇಕರು ನಾಪತ್ತೆಯಾಗಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಉಗ್ರಗಾಮಿ ಗುಂಪು ಎಡಿಎಫ್ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆಸಿರುವ ದಾಳಿಯಿಂದ ಸತ್ತವರಲ್ಲಿ ಮನೆಯಲ್ಲಿ ಜೀವಂತವಾಗಿ ಸುಟ್ಟುಹೋದ 15 ಪುರುಷರು ಮತ್ತು ಇಟುರಿ ಪ್ರಾಂತ್ಯದ ಇರುಮು ಪ್ರದೇಶದ ಅಪಕುಲು ಗ್ರಾಮದಲ್ಲಿ ಗುಂಡು ಹಾರಿಸಲ್ಪಟ್ಟ ಏಳು ಜನರು ಸೇರಿದ್ದಾರೆ. ವೇಲೆಸ್ ವೊಂಕುಟು ಆಡಳಿತ ಪ್ರದೇಶದಲ್ಲಿ ಇತರ ಮೂವರು ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾನವ ಹಕ್ಕುಗಳ ಕಾರ್ಯಕರ್ತ ಕ್ರಿಸ್ಟೋಫ್ ಮುನ್ಯಾಂಡೆರು, ಚರ್ಚ್ ನಲ್ಲಿ ರಾತ್ರಿ ಉಳಿದುಕೊಂಡಿದ್ದವರ ಮೇಲೆ ದಾಳಿ ನಡೆಸಿದ ದಾಳಿಕೋರರು ಜನರ ಮೇಲೆ ಬಂದೂಕುಗಳಿಂದ ದಾಳಿ ನಡೆಸಿದರು. ಮಚ್ಚುಗಳಿಂದ ಇರಿದರು. ಸುಮಾರು 43 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ ಎಂದು ಹೇಳಿದರು.
ಡಿಆರ್‌ಸಿ ಸೇನಾ ವಕ್ತಾರ ಜೂಲ್ಸ್ ನ್ಗೊಂಗೊ ಅವರು ಮಾತನಾಡಿ, ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಕೊಮಾಂಡಾದಿಂದ ಸ್ವಲ್ಪ ದೂರದಲ್ಲಿರುವ ಚರ್ಚ್‌ಗೆ ನುಗ್ಗಿದ್ದ ಶಸ್ತ್ರಸಜ್ಜಿತ ವ್ಯಕ್ತಿಗಳು ಅಲ್ಲಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು ಮೂರು ಸುಟ್ಟಿರುವ ಶವಗಳು ಕಂಡು ಬಂದಿವೆ. ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದರು. ಕೊಮಾಂಡಾದ ನಾಗರಿಕ ಸಮಾಜದ ಸಂಯೋಜಕರಾದ ಡಿಯುಡೋನ್ ಡುರಾಂತಬೊ ಮಾತನಾಡಿ, ಎಲ್ಲಾ ಭದ್ರತಾ ಅಧಿಕಾರಿಗಳು ಇರುವ ಪಟ್ಟಣದಲ್ಲಿ ಇಂತಹ ಘಟನೆ ನಡೆದಿರುವುದು ನಂಬಲಾಗದ ಸಂಗತಿ. ಕೆಲವರು ಇಲ್ಲಿಂದ ಪಲಾಯನ ಮಾಡಿ ಬುನಿಯಾ ಪಟ್ಟಣಕ್ಕೆ ತೆರಳಿದ್ದಾರೆ ಎಂದು ತಿಳಿಸಿದರು.
