ಉದಯವಾಹಿನಿ,ಮುದ್ದೇಬಿಹಾಳ: ತನಿಖೆ ಮತ್ತು ೫ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪುರಸಭೆಯ ಮಾಜಿ ನಾಮನಿರ್ದೇಶಿತ ಸದಸ್ಯ ಪ್ರಸನ್ನಕುಮಾರ ಮಠ ಮತ್ತಿತರರು ಇಲ್ಲಿನ ಬಿಇಓ ಕಚೇರಿ ಆವರಣದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು. ದಿ ಮುದ್ದೇಬಿಹಾಳ ವೀರಶೈವ ವಿದ್ಯಾವರ್ಧಕ ಅಸೋಶಿಯೇಶನ್ (ವಿಬಿಸಿ ಪ್ರೌಢಶಾಲೆ) ಆಡಳಿತ ಮಂಡಳಿ ಅಕ್ರಮವಾಗಿ ಕಬ್ಜಾ ಹೊಂದಿರುವ ಭೂಮಿಯಲ್ಲಿ ಶೈಕ್ಷಣಿಕ ಕಾಯ್ದೆಯ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ವಿರೋಧಿಸಿ, ಶಿಕ್ಷಣ ಇಲಾಖೆಯ ಡಿಡಿಪಿಐ, ಬಿಇಓ ಅವರ ವಿರುದ್ಧ ೧೧ ಉಲ್ಲೇಖಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ವಿಬಿಸಿ ಪ್ರೌಢಶಾಲೆಯ ಸರ್ವೆ ನಂಬರ್ ೮೪ರಲ್ಲಿನ ಸಿಟಿಎಸ್ ೨೬೦೬ನ್ನು ಅಕ್ರಮವಾಗಿ ಶಿಕ್ಷಣಕ್ಕೆಂದು ಕಬ್ಜಾ ಮಾಡಿಕೊಂಡು ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿಲ್ಲಿಸಿ ವಾಣಿಜ್ಯ ಉದ್ದೇಶದ ಕಟ್ಟಡ, ಚಟುವಟಿಕೆ ತೆರವುಗೊಳಿಸಬೇಕು. ಅಕ್ರಮ ಬಳಕೆ ವಿರುದ್ಧ ಶಿಕ್ಷಣ ಇಲಾಖೆಯು ಪ್ರಕರಣ ದಾಖಲಿಸಬೇಕು. ೧೧ ಉಲ್ಲೇಖಗಳ ಕುರಿತು ಸೂಕ್ತ ತನಿಖೆ ನಡೆಸಬೇಕು. ಶಿಕ್ಷಣ ಕಾಯ್ದೆ ವಿರುದ್ಧ ನಡೆದುಕೊಳ್ಳುತ್ತಿರುವ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಬೇಕು. ಎಲ್ಲ ಬೇಡಿಕೆಗಳ ಈಡೇರಿಕೆಗೆ ಡಿಡಿಪಿಐ ಅವರಿಂದಲೇ ಲಿಖಿತ ಉತ್ತರ ಒದಗಿಸಬೇಕು ಎಂದು ಈ ಕುರಿತು ಬಿಇಓಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಧರಣಿ ಮಾಹಿತಿ ಪಡೆದು ಪ್ರಭಾರ ಬಿಇಓ ಯು.ಬಿ.ಧರಿಕಾರ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಅಹವಾಲು ಆಲಿಸಿ ಅವರು ಸಲ್ಲಿಸಿದ ದಾಖಲೆ ಪರಿಶೀಲಿಸಿದರು. ಈ ಕುರಿತು ಮೇಲಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಭರವಸೆ ನೀಡಿದರು. ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿ ಸಂಘದ ತಾಲೂಕು ಅಧ್ಯಕ್ಷ ಹಿರೇಮಠ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!