
ಉದಯವಾಹಿನಿ ದೇವರಹಿಪ್ಪರಗಿ: ಸತ್ಯ ಹಾಗೂ ಧರ್ಮವನ್ನು ಪಾಲಿಸುತ್ತ ಸಾಗಿದಲ್ಲಿ ಜೀವನ ಸ್ವರ್ಗದಂತಾಗುವುದು ಎಂದು ದೇವರ ಹಿಪ್ಪರಗಿ ಪಟ್ಟಣದ ಜಡಿಮಠದ ಶ್ರೀ ಷ.ಬ್ರ.ಜಡೆ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ಕೆರೂಟಗಿ ಗ್ರಾಮದ ಹಿರೇಮಠದಲ್ಲಿ ಶನಿವಾರದಂದು ನಡೆದ ಶ್ರೀ ಸಿದ್ದರಾಮೇಶ್ವರ ಪುರಾಣ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ 10ದಿನದ ಪುರಾಣ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಭಕ್ತಿ ಎಂಬುದು ಅಳಿದು ಹೋಗುವ ಧಾರ್ಮಿಕ ಕಾರ್ಯ ಉಳಿಯುವ ಕೆಲಸ ಕೆರೂಟಗಿ ದೈವ ಮಾಡುತ್ತಿರುವ ಕಾರ್ಯ ಸಂತಸದ ವಿಷಯವಾಗಿದೆ, ಪುರಾಣ ಕೇಳುವುದರಿಂದ ಜೀವನ ಪಾವನ ವಾಗುತ್ತದೆ, ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಸ್ಮಾರಕ ಆಗುವ ಹಾಗೆ ಬೆಳೆಸಬೇಕು,ಪ್ರತಿಯೊಬ್ಬರು ಸತ್ಯ ಅಹಿಂಸೆ ಧರ್ಮ ಪಾಲಿಸಬೇಕು. ಎಲ್ಲ ನನ್ನಿಂದಲೆ ಎನ್ನುವ ಮನೋಭಾವನೆ ಬಿಡಬೇಕು ಎಂದು ಆಶೀರ್ವಚನ ನೀಡಿದರು. ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದೇವರಹಿಪ್ಪರಗಿ ಪಟ್ಟಣದ ಅವುಗೇಶ್ವರ ತಪೋಧಾಮ ಶ್ರೀ ಶಿವಯೋಗಿ ಸ್ವಾಮೀಜಿಗಳು ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವೇದಮೂರ್ತಿ ರಾಚಯ್ಯ ಶಾಸ್ತ್ರಿಗಳಿಂದ ಶ್ರೀ ಸಿದ್ದರಾಮೇಶ್ವರ ಪುರಾಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಗಣ್ಯರು, ಶ್ರೀಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
