ಉದಯವಾಹಿನಿ, ಬೆಂಗಳೂರು : ಕಳೆದ ನವೆಂಬರ್‌ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತು ಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸಮರ್ಥಿಸಿಕೊಂಡರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಅವರು, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷದಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ನಡೆಸದೇ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು, ಸಫಾರಿಯನ್ನು ಏಕಾಏಕಿ ನಿಲ್ಲಿಸಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು, ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು, ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು.
ನವೆಂಬರ್‌ನಲ್ಲಿ ತಾವು ಚಾಮರಾಜನಗರದಲ್ಲಿ ಈ ಸಂಬಂಧ ಸಭೆ ನಡೆಸಿದಾಗ ಹಲವು ರೈತ ಸಂಘಟನೆಗಳು ಸಫಾರಿ ರಾತ್ರಿಯವರೆಗೂ ನಡೆಯುತ್ತಿದೆ. ಹೆಚ್ಚಿನ ವಾಹನಗಳ ಸಂಚಾರ ಇದೆ. ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ವಿಚಲಿತವಾಗಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು, ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ, ಮನವಿ ನೀಡಿದ್ದರು. ಈ ಮಧ್ಯೆ ತಾವು ಬೀದರ್‌ನಲ್ಲಿದ್ದಾಗ ಒಂದು ವಾರದ ಅಂತರದಲ್ಲಿ ಮತ್ತೊಂದು ಹುಲಿದಾಳಿ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಿಬ್ಬಂದಿ ಮತ್ತು ವಾಹನವನ್ನು ಕಾಡಿನಂಚಿನ ಗ್ರಾಮದಲ್ಲಿ ನಿಗಾ ಇಡಲು ಬಳಸಲಾಯಿತು ಎಂದು ತಿಳಿಸಿದರು.
