
ಉದಯವಾಹಿನಿ ಮಸ್ಕಿ: ದಲಿತ ಮುಖಂಡ ಪ್ರಸಾದ ಹತ್ಯೆ ಖಂಡಿಸಿ ಇಲ್ಲಿನ ಮಾದಿಗ ಸಮಾಜದ ಮುಖಂಡರು ಬುಧವಾರ ಪ್ರತಿಭಟನೆ ಮಾಡಿದರು. ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟಿಸಿ ಆರೋಪಿಗಳ ವಿರುದ್ಧ ಅಕ್ರೋಶ ಹೊರ ಹಾಕಿದರು. ಶಿರಸ್ತೆದಾರ ಅಕ್ತರ ಅಲಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ದಲಿತ ಮುಖಂಡ ಹನುಮಂತಪ್ಪ ವೆಂಕಟಾಪೂರ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಲಿತರ ಕೊಲೆ, ದೌರ್ಜನ್ಯಗಳಂತ ಪ್ರಕರಣ ಹೆಚ್ಚುತ್ತಿವೆ. ದಲಿತರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದ ಪ್ರಸಾದ ಎಂಬ ದಲಿತ ಮುಖಂಡನ ಮೇಲೆ ಮಚ್ಚಿನಿಂದ ಭರ್ಭರವಾಗಿ ಹತ್ಯೆ ಮಾಡಲಾಗಿದೆ.ಈಗಾಗಲೆ 12 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಲು ಪೋಲಿಸರೇ ಎಡೆ ಮಾಡಿಕೊಡುವಂತಿದೆ. ಪ್ರಸಾದ ಕೊಲೆಗೆ ಕಾರಣಿಭೂತ ಆರೋಪಿಗಳಿಗೆ ಕೂಡಲೇ ಬಂಧಿಸಬೇಕು, ಮಾದಿಗ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪೊಲೀಸ್ ಇಲಾಖೆ ಕ್ರಮ ಜರುಗಿಸಲು ವಿಫಲವಾಗಿದೆ. ಹತ್ಯೆಗೊಳಗಾದ ವ್ಯಕ್ತಿಯ ಕುಟುಂಬ ತೀರಾ ಬಡವರಿದ್ದು, ಉಪಜೀವನಕ್ಕೆ ಜಮೀನು ಮತ್ತು ಒಂದು ಕೋಟಿ ರೂಪಾಯಿ ಹಣವನ್ನು ಪರಿಹಾರವಾಗಿ ನೀಡಬೇಕು, ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷಣ ವಿಧಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ದಾನಪ್ಪ ನಿಲೋಗಲ್ಲ, ಮೌನೇಶ ಮುರಾರಿ, ಮಲ್ಲಯ್ಯ ಬಳ್ಳಾ, ಬಾಲಸ್ವಾಮಿ ಜಿನ್ನಾಪೂರ, ಹನುಮಂತ ಪರಾಪೂರ, ಮೌನೇಶ ತುಗ್ಗಲದಿನ್ನಿ, ಭೀಮರಾಯಪ್ಪ ಬಳಗಾನೂರ, ತುರುಮಂದೆಪ್ಪ, ಮರಿಸ್ವಾಮಿ ಬೆನಕನಾಳ, ಜಯಪ್ಪ ಮೆದಿಕಿನಾಳ ಕಾಶೀಂ ಮುರಾರಿ, ಅಶೋಕ ಮುರಾರಿ, ಕಿರಣ ಮುರಾರಿ, ಜಮದಗ್ನಿ ಸೇರಿದಂತೆ ಇನ್ನಿತರ ದಲಿತ ಮುಖಂಡರಿದ್ದರು.
