ಉದಯವಾಹಿನಿ, ನುಗ್ಗೆಕಾಯಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಾಂಶಗಳು ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳ ಗಣಿಯಾಗಿದೆ. ಆಯುರ್ವೇದದಲ್ಲಿಯೂ ನುಗ್ಗೆಯ ಎಲೆ ಹಾಗೂ ಕಾಯಿಗೆ ವಿಶೇಷ ಸ್ಥಾನವಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ ಎಂಬುದು ನಿಜವಾದರೂ, ಕೆಲವು ಆರೋಗ್ಯ ಸಮಸ್ಯೆ ಇರುವವರು ಇದನ್ನು ಸೇವಿಸುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಯಾರು ನುಗ್ಗೆಕಾಯಿಯಿಂದ ದೂರವಿರಬೇಕು?
ಗರ್ಭಿಣಿಯರು: ನುಗ್ಗೆಕಾಯಿ ದೇಹದಲ್ಲಿ ಅತಿಯಾದ ಉಷ್ಣತೆಯನ್ನು ಉತ್ಪಾದಿಸುತ್ತದೆ. ಇದು ಗರ್ಭಾವಸ್ಥೆಯಲ್ಲಿ ಅಸ್ವಸ್ಥತೆ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಗರ್ಭಿಣಿಯರು ಇದನ್ನು ದೂರವಿಡುವುದು ಉತ್ತಮ.
ಅತಿಯಾದ ಮುಟ್ಟಿನ ರಕ್ತಸ್ರಾವ: ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವ ಸಮಸ್ಯೆ ಇರುವ ಮಹಿಳೆಯರು ನುಗ್ಗೆಕಾಯಿ ಸೇವಿಸಬಾರದು. ಇದರ ‘ಉಷ್ಣಗುಣ’ ರಕ್ತಸ್ರಾವವನ್ನು ಮತ್ತಷ್ಟು ಹೆಚ್ಚಿಸಿ, ದೈಹಿಕ ದೌರ್ಬಲ್ಯಕ್ಕೆ ಕಾರಣವಾಗಬಹುದು.
ಕಡಿಮೆ ರಕ್ತದೊತ್ತಡ: ನುಗ್ಗೆಕಾಯಿಯು ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಗುಣ ಹೊಂದಿದೆ. ಹೀಗಾಗಿ ಈಗಾಗಲೇ “ಲೋ ಬಿಪಿ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ರಕ್ತದೊತ್ತಡ ಮತ್ತಷ್ಟು ಕುಸಿದು ತಲೆಸುತ್ತು ಕಾಣಿಸಿಕೊಳ್ಳಬಹುದು.
ಜೀರ್ಣಕ್ರಿಯೆಯ ತೊಂದರೆ: ನುಗ್ಗೆಕಾಯಿಯಲ್ಲಿ ನಾರಿನಂಶ ಹೆಚ್ಚಿರುತ್ತದೆ. ದೀರ್ಘಕಾಲದ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆಯ ಉಬ್ಬರದ ಸಮಸ್ಯೆ ಇರುವವರು ಅತಿಯಾಗಿ ನುಗ್ಗೆ ಸೇವಿಸಿದರೆ ಅಸಿಡಿಟಿ ಮತ್ತು ಹೊಟ್ಟೆ ನೋವು ಹೆಚ್ಚಾಗಬಹುದು.
