ಉದಯವಾಹಿನಿ, ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಸೇರಿದಂತೆ 50 ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರನ್ನು ಬಂಧಿಸಿದ ಬೆನ್ನಲ್ಲೇ ಹೋರಾಟದ ಕಿಚ್ಚು ತೀವ್ರ ಸ್ವರೂಪ ಪಡೆದುಕೊಂಡು ಸಂಘಟನೆಗಳಲ್ಲಿ ಹಿಂದೆಂದೂ ಕಾಣದಂತಹ ಒಗ್ಗಟ್ಟು ಕಂಡುಬಂದಿದೆ. ವಾಣಿಜ್ಯ ಮಳಿಗೆಗಳು, ಉದ್ಯಮಗಳು ಹಾಗೂ ಇತರ ಸಂಸ್ಥೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯಕ್ಕಾಗಿ ಕರವೇ ಕಾರ್ಯಕರ್ತರು ಕಳೆದ ಒಂದು ವಾರದಿಂದಲೂ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು.
ನಿನ್ನೆ ಏಕಕಾಲಕ್ಕೆ ಬೆಂಗಳೂರಿನಾದ್ಯಂತ ನಡೆದ ಪ್ರತಿಭಟನೆಯಲ್ಲಿ ಹಲವು ಕಡೆ ಖಾಸಗಿ ಸಂಸ್ಥೆಗಳ ನಾಮಫಲಕಗಳನ್ನು ಫ್ಲೆಕ್ಸ್, ಹೋರ್ಡಿಂಗ್ ಮತ್ತು ಫಲಕಗಳನ್ನು ಕರವೇ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಪೊಲೀಸರೊಂದಿಗೂ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಟಿ.ಎ.ನಾರಾಯಣಗೌಡ ಅವರ ನೇತೃತ್ವದ ತಂಡವನ್ನು ಪೊಲೀಸರು ಬಂಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೆಲವು ಕಾರ್ಯಕರ್ತರಿಗೆ ಜಾಮೀನು ಸಿಕ್ಕಿದೆಯಾದರೂ, ಪ್ರಮುಖರಿಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಇದು ಕನ್ನಡ ಸಂಘಟನೆಗಳ ಕಿಚ್ಚಿಗೆ ಕಾರಣವಾಗಿದೆ. ಕರವೇ ಬೆಂಬಲಕ್ಕೆ ಇತರ ಕನ್ನಡ ಪರ ರೈತ ಸಂಘಟನೆಗಳು ನಿಂತಿವೆ. ನಾರಾಯಣಗೌಡ ಅವರ ಬಂಧನವನ್ನು ಖಂಡಿಸಿ ಬೆಂಗಳೂರಿನಾದ್ಯಂತ ಸರಣಿ ಪ್ರತಿಭಟನೆಗಳು ಆಯೋಜನೆಗೊಂಡಿವೆ.
