ಉದಯವಾಹಿನಿ, ಬೆಂಗಳೂರು: ನಗರದ ಪ್ರತಿಷ್ಠಿತ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಿರುವ ಆತಂಕಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಐಪಿಎಲ್ ಪಂದ್ಯ ನಡೆಯುವ ದಿನದಂದೇ ಕ್ರೀಡಾಂಗಣದ ಪ್ರಮುಖ ಭದ್ರತಾ ವ್ಯವಸ್ಥೆಯಾದ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ಗಳನ್ನು ಕತ್ತರಿಸಿ, ಇಡೀ ಭದ್ರತಾ ಜಾಲವನ್ನೇ ಅಸ್ತವ್ಯಸ್ತಗೊಳಿಸಲು ಯತ್ನಿಸಲಾಗಿದೆ.ಏಪ್ರಿಲ್ 24 ರಂದು ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ (GT)ತಂಡಗಳ ಮಧ್ಯೆ ಐಪಿಎಲ್ ಪಂದ್ಯ ಆಯೋಜನೆಯಾಗಿತ್ತು. ಪಂದ್ಯ ನಡೆಯುವ ದಿನದಂದು ಬೆಳಿಗ್ಗೆ ಕ್ರೀಡಾಂಗಣದ ತಾಂತ್ರಿಕ ತಂಡವು ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಬರೋಬ್ಬರಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಆಫ್‌ಲೈನ್ ಆಗಿರುವುದು ಪತ್ತೆಯಾಗಿದೆ.
ಕ್ಯಾಮೆರಾಗಳು ಏಕಾಏಕಿ ಬಂದ್ ಆಗಿದ್ದರಿಂದ ತಾಂತ್ರಿಕ ತಂಡವು ತಕ್ಷಣವೇ ಕೂಲಂಕಷವಾಗಿ ತನಿಖೆ ನಡೆಸಿದೆ. ಈ ವೇಳೆ ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ (IVS ಎಂಬ ಉಪ-ವಿತರಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಇ. ಮತ್ತು ಅಬ್ದುಲ್ ಕಲಾಂ ಈ ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಇಬ್ಬರು ಆರೋಪಿಗಳು ಕ್ರೀಡಾಂಗಣವನ್ನು ಪ್ರವೇಶಿಸಲು ಅಗತ್ಯವಾದ ಮಾನ್ಯ ಪಾಸ್‌ಗಳನ್ನು (PASS) ಹೊಂದಿರಲಿಲ್ಲ. ಆದರೂ ಇಬ್ಬರು ಬೆಳಿಗ್ಗೆ 11:30ರ ಸುಮಾರಿಗೆ ನಿಷ್ಕ್ರಿಯಗೊಂಡ ಹಳೆಯ ಕಾರ್ಡ್ ಬಳಸಿಕೊಂಡು ಕ್ರೀಡಾಂಗಣವನ್ನು ಅನಧಿಕೃತವಾಗಿ ಪ್ರವೇಶಿಸಿದ್ದರು. ಕ್ರೀಡಾಂಗಣವನ್ನು ಪ್ರವೇಶಿಸಿದ ಆರೋಪಿಗಳು, ಎನ್‌ವಿಆರ್ (NVR) ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಉದ್ದೇಶಪೂರ್ವಕವಾಗಿ ತಪ್ಪು ತಪ್ಪಾಗಿ ನಿರ್ವಹಿಸಿ ಅವುಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾರೆ. ಇದರಿಂದಾಗಿ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಂಡಿತ್ತು. ಈ ಹಿಂದೆ ಭದ್ರತೆಗಾಗಿ ಮಾಡಲಾಗಿದ್ದ ಎಲ್ಲಾ ಪ್ರಮುಖ ಆರಂಭಿಕ ತಾಂತ್ರಿಕ ಕೆಲಸಗಳನ್ನು ಇವರು ಹಾಳು ಮಾಡಿದ್ದರು. ಆರೋಪಿಗಳು ಸರಿಯಾದ ಅನುಮತಿ ಇಲ್ಲದೆಯೇ ಕ್ರೀಡಾಂಗಣದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು  ಪ್ರವೇಶಿಸಿರುವುದು ಮತ್ತು ನಂತರ ಪಾರ್ಕಿಂಗ್ ಪ್ರದೇಶದ ಬಳಿ ಇರುವ ಕನೆಕ್ಷನ್ ಬಾಕ್ಸ್ ಕಡೆಗೆ ಚಲಿಸುತ್ತಿರುವ ದೃಶ್ಯಗಳು ಲಭ್ಯವಿದೆ.

Leave a Reply

Your email address will not be published. Required fields are marked *

error: Content is protected !!