ಉದಯವಾಹಿನಿ, ಬೆಂಗಳೂರು: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಪರಾಧಿಗಳು ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿನಯ್ ಕುಲಕರ್ಣಿ ಸೇರಿ ಇಬ್ಬರು ಜೀವಾವಧಿ ಶಿಕ್ಷೆ ತೀರ್ಪಿಗೆ ತಡೆಯಾಜ್ಞೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಪರಾಧಿ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಜೀವಾವಧಿ ಶಿಕ್ಷೆ ತೀರ್ಪಿಗೆ ತಡೆಯಾಜ್ಞೆ ನೀಡಿ, ಅಮಾನತಿನಲ್ಲಿ ಇಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಅರ್ಜಿ (ಏ.27) ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ತೀರ್ಪು ಪ್ರಕಟವಾದ 90 ದಿನಗಳಲ್ಲಿ ತೀರ್ಪನ್ನು ಅಮಾನತಿನಲ್ಲಿ ಇಡದೇ ಹೋದರೆ ಶಾಸಕ ಸ್ಥಾನ ಅನರ್ಹ ಆಗುವ ಭಯದಲ್ಲಿ ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. 2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆಯಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಮೇಲೆ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಇಂಚಿಂಚು ತನಿಖೆ ನಡೆಸಿದ್ದ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿತ್ತು. 10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿತ್ತು.

Leave a Reply

Your email address will not be published. Required fields are marked *

error: Content is protected !!