ಉದಯವಾಹಿನಿ,ಕೋಲಾರ: ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಟಾನ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಯೋಗಗಳ ಮೂಲಕ ವಿಜ್ಞಾನದ ಅರಿವು ನೀಡುವ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕಯ ಹಾದಿ ಸುಗಮವಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಅಭಿನಂದಿಸಿದರು.ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಗಸ್ತ್ಯ ಫೌಂಡೇಷನ್ ಕೋಲಾರ ಹಾಗೂ ಎಲ್‌ಎಸ್‌ಐ(ಎಂ.ಎಸ್‌ಎಲ್) ಸಹಯೋಗದೊಂದಿಗೆ ಮೊಬೈಲ್ ವಿಜ್ಞಾನ ಪ್ರಯೋಗಾಲಯದ ಮೂಲಕ ಶಾಲೆಗೆ ಆಗಮಿಸಿ ಮಕ್ಕಳ ಚೇತೋಹಾರಿ ಕಲಿಕೆಗೆ ನೆರವಾಗಿದ್ದನ್ನು ಸ್ವಾಗತಿಸಿ ಅವರು ಮಾತನಾಡಿದರು.
ಈಗಾಗಲೇ ಕೋಲಾರ ತಾಲ್ಲೂಕಿನ ನೂರಾರು ಶಾಲೆಗಳಲ್ಲಿ ಉಚಿತವಾಗಿ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸಿರುವ ಅಗಸ್ತ್ಯ ಫೌಂಡೇಷನ್ ಕಾರ್ಯ ಮೆಚ್ಚುವಂತದ್ದು ಎಂದ ಅವರು, ಮಕ್ಕಳಿಗೆ ತಾತ್ವಿಕ ಬೋಧನೆಗಿಂತ ಚಟುವಟಿಕೆಯಾಧಾರಿತ ಪ್ರಯೋಗಗಳ ಮೂಲಕ ಕಲಿಕೆ ಹೆಚ್ಚು ಕಾಲ ಮನದಲ್ಲಿ ಉಳಿಯುವಂತೆ ಮಾಡುತ್ತದೆ ಎಂದರು.
ವಿಜ್ಞಾನ ಕಬ್ಬಿಣದ ಕಡಲೆ ಎಂಬ ಆರೋಪವಿದೆ ಆದರೆ ಪ್ರಯೋಗಗಳ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟರೆ ಅವರು ಬೇಗ ಕಲಿಯುತ್ತಾರೆ ಮತ್ತು ಪರೀಕ್ಷೆಗಳಲ್ಲಿ ಉತ್ತರಿಸುವ ಸಾಮರ್ಥ್ಯವೂ ಹೆಚ್ಚುತ್ತದೆ ಎಂದು ತಿಳಿಸಿ, ಸರ್ಕಾರದ ನಿರ್ದೇಶನವೂ ಸಹಾ ಮಕ್ಕಳಿಗೆ ಚಟುವಟಿಕೆಯಾಧಾರಿತ ಕಲಿಕೆ ನೀಡಿ ಎಂಬುದಾಗಿದೆ ಎಂದರು.
ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು, ವಿಜ್ಞಾನಕ್ಕೆ ಸಂಬಂಧಿಸಿದಂತೆ ಇರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ, ನಿಮಗೆ ಪಠ್ಯದ ಕುರಿತು ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
