ಉದಯವಾಹಿನಿ, ವಿಜಯಪುರ(ದೇವನಹಳ್ಳಿ): ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಹಳ್ಳಿಯಲ್ಲಿ ಅಧ್ಯಕ್ಷೆ ಸುಮಾದೇವಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಗ್ರಾಮಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರುಹಾಜರಿಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಹಾರೋಹಳ್ಳಿ, ತಿಮ್ಮಹಳ್ಳಿ, ಚಿಕ್ಕನಹಳ್ಳಿ, ದೊಡ್ಡಮುದ್ದೇನಹಳ್ಳಿ, ಬುಳ್ಳಹಳ್ಳಿ ಗ್ರಾಮಗಳ ಸಾರ್ವಜನಿಕರು ಗ್ರಾಮಸಭೆಯಲ್ಲಿ ಸೇರಿದ್ದರು.ತಿಮ್ಮಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಹೊರಗೆ ಹೋಗಲು ಜಾಗವಿಲ್ಲ, ರಾಜಕಾಲುವೆ ಅಳತೆ ಮಾಡಿ, ಒತ್ತುವರಿ ತೆರವುಗೊಳಿಸಿ ರಾಜಕಾಲುವೆಯ ಮೂಲಕ ನೀರು ಕೆರೆಗೆ ಹರಿದುಹೋಗುವಂತೆ ಮಾಡಬೇಕು. ದಂಡಿಗಾನಹಳ್ಳಿಯವರೆಗೂ ರಸ್ತೆ ನಿರ್ಮಾಣವಾಗಬೇಕು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು, ನರೇಗಾ ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ದೊಡ್ಡಮುದ್ದೇನಹಳ್ಳಿಯಲ್ಲಿ ಸಾರ್ವಜನಿಕ ಸ್ಮಶಾನವಿಲ್ಲ. ಈ ಕುರಿತು ನಾವು ಹಲವು ಬಾರಿ ಮನವಿ ಕೊಟ್ಟರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ. ಅಂಗನವಾಡಿ ಕೇಂದ್ರ ಸುಸಜ್ಜಿತವಾಗಿಲ್ಲ. ಶಾಲೆಯ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮಸಭೆಯಲ್ಲಿ ತಾಲ್ಲೂಕು ಮಟ್ಟದ ಯಾವುದೇ ಅಧಿಕಾರಿಗಳು ಬಂದಿಲ್ಲ. ಸಮಸ್ಯೆಗಳನ್ನು ನಾವು ಯಾರಿಗೆ ಹೇಳಬೇಕು? ಅನುಷ್ಟಾನಾಧಿಕಾರಿಗಳು ಇಲ್ಲದೆ ಹೋದರೆ, ನಮ್ಮ ಸಮಸ್ಯೆಗ ಇತ್ಯರ್ಥ ಪಡಿಸುವವರು ಯಾರು? ಈ ಯಾವ ಯಾವ ಇಲಾಖೆಯಿಂದ ಅನುಷ್ಟಾನಾಧಿಕಾರಿಗಳು ಬಂದಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವರಾಜ್ ಒತ್ತಾಯಿಸಿದರು.
