ಉದಯವಾಹಿನಿ, ನವಲಗುಂದ: ಬರಗಾಲದ ಹಿನ್ನೆಲೆಯಲ್ಲಿ ಉಂಟಾಗಿರುವ ಮೇವು ಹಾಗೂ ಕುಡಿಯುವ ನೀರಿನ ಕೊರತೆ ನೀಗಿಸಲು ಸರಕಾರದ ನೆರವಿನಿಂದ ಮೇವು ಬ್ಯಾಂಕ್ ಪ್ರಾರಂಭಿಸಿ, ಆ ಮೂಲಕ ರಿಯಾಯಿತಿ ದರದಲ್ಲಿ ಮೇವು ವಿತರಿಸಲಾಗುತ್ತಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವವರ ಹೇಳಿದರು.
ಭಾನುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೇವು ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ಕುರಿ-ಮೇಕೆಗೆ ಅರ್ಧ ಕೆಜಿ ಹಾಗೂ ಪ್ರತಿ ಪಶುಗಳಿಗೆ ಆರು ಕೆಜಿ ವಿತರಿಸಲಾಗುವುದು ಪ್ರತಿ ಕೆಜಿ ಮೇವಿಗೆ ಎರಡು ರೂ ನಂತೆ ಹದಿನೈದು ದಿನಕ್ಕಾಗುವಷ್ಟು ಮೇವು ನೀಡಲಾಗುವುದು ಎಂದರು.
ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಮನೋಹರ ದ್ಯಾಬೇರಿ ಮಾತನಾಡಿ ನವಲಗುಂದ ಹಾಗೂ ಅಣ್ಣಿಗೇರಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ತೊಟ್ಟಿ ಮಾಡಲು ಈಗಾಗಲೇ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರ ಮುಖಾಂತರ ಮನವಿ ಮಾಡಲಾಗಿದೆ ಅದಾಗ್ಗೂ ಮತ್ತೆ ಎಲ್ಲಿಯಾದರೂ ಅವಶ್ಯಕತೆ ಇದೆ ಎಂದು ರೈತರು ಮನವಿ ಸಲ್ಲಿಸಿದರೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಲ್ಲಿಯೂ ಕೂಡಾ ನೀರು ಮೇವಿನ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಕುರಿ-ಮೇಕೆ ಹಾಗೂ ಪಶುಗಳಿಗೆ ಆಕಸ್ಮಿಕ ಸಾವು ಸಂಭವಿಸಿದರೆ ಪಶುಗಳಿಗೆ ಹತ್ತು ಸಾವಿರ ರೂ ಹಾಗೂ ಕುರಿ-ಮೇಕೆಗಳಿಗೆ ಗಳಿಗೆ ಐದು ಸಾವಿರ ರೂ ಸರಕಾರಿ ಸಹಾಯ ಧನ ನೀಡಲಾಗುವುದು. ತುರ್ತು ಚಿಕ್ಕಿತ್ಸೆಗಾಗಿ ಸಹಾಯವಾಣಿ 1962 ಸಂಖ್ಯೆಗೆ ಕರೆ ಮಾಡಿದರೆ ರೈತರ ಮನೆ ಬಾಗಿಲಿಗೆ ತರಳಿ ಚಿಕಿತ್ಸೆ ನೀಡಲಾಗುವುದು ವಾರದಲ್ಲಿ ನಾಲ್ಕು ದಿನ ಸಂಚಾರಿ ವಾಹನ ಈಗಾಗಲೇ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಚಿಕಿತ್ಸೆಗಾಗಿ ಸಂಚರಿಸುತ್ತಿದೆ. ನವಲಗುಂದ ಅಣ್ಣಿಗೇರಿ ರೈತರು ಪ್ರಯೋಜನ ಪಡೆಯಬಹುದು ಎಂದರು.
ಮೇವು ಹಾಗೂ ಕುಡಿಯುವ ನೀರಿಗಾಗಿ ತಹಶೀಲ್ದಾರ್ ಕಚೇರಿ ಸಹಾಯವಾಣಿ 08380229240 ಗೂ ಸಂಪರ್ಕಿಸ ಬಹುದು. ಮೇವು ನೀರಿಗಾಗಿ ಇನ್ಯಾವುದೇ ತೊಂದರೆ ಇದಲ್ಲಿ ಸಮೀಪದ ಪಶು ಆಸ್ಪತ್ರೆಗೆ ಸಂಪರ್ಕಿಸಿ ಅಥವಾ ಸಹಾಯವಾಣಿ ಹಾಗೂ ಪಶು ಸಕಿಯವರನ್ನು ಸಂಪರ್ಕಿಸಬಹುದು ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಮನೋಹರ ದ್ಯಾಬೇರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿ ಹೆಚ್. ಬಿ. ಸವಣೂರ ಸೇರಿದಂತೆ ಪಶುಆಸ್ಪತ್ರೆ ವೈದ್ಯಾಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಎಪಿಎಂಸಿ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
