ಉದಯವಾಹಿನಿ, ಬೆಂಗಳೂರು: ಸರಗಳ್ಳತನ, ಮನೆಗಳ್ಳತನ, ವಾಹನಗಳ್ಳತನ ಸೇರಿದಂತೆ ಗಂಭೀರ ಕಳವು ಪ್ರಕರಣಗಳನ್ನು ಬೇಧಿಸುವ ಜೊತೆಗೆ ಕಳವು ನಿಯಂತ್ರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.
ನಗರದ ಸಿಎಆರ್ ನಾರ್ಥ್ ಕವಾಯಿತು ಮೈದಾನದಲ್ಲಿ ಆಯೋಜಿಸಿದ್ದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಸಿಪಿ ಮಟ್ಟದ ಅಧಿಕಾರಿಗಳಿಗೆ ತಮ ವ್ಯಾಪ್ತಿಯ ಅಪರಾಧಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕಾರಣೀಭೂತರಾದ ಅಂಶಗಳ ನಿಯಂತ್ರಣಕ್ಕೆ ಹಾಗೂ ಪರಿಹಾರೋಪಾಯಗಳು ಏನು ಎಂಬ ವರದಿ ನೀಡಬೇಕೆಂದು ಸೂಚಿಸಿದರು.
ಡಿಸಿಪಿ ನೇತೃತ್ವದಲ್ಲಿ ಅನುಷ್ಠಾನ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಅಪರಾಧ ಪ್ರಕರಣಗಳನ್ನು ಬೇಧಿಸುವುದಷ್ಟೇ ಅಲ್ಲದೆ ನಿಯಂತ್ರಿಸಲು ಕ್ರಮ ವಹಿಸಬೇಕು, ಈಗಾಗಲೇ ನಾವು ಮಾಡಿರುವ ಕೆಲಸಗಳು ಸಾರ್ವಜನಿಕರ ಮನ್ನಣೆಗೆ ಪಾತ್ರವಾಗಿವೆ. ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಮಳೆ ನೀರು ಇಂಗು ಗುಂಡಿ: ಇದೇ ವೇಳೆ ಸಿಎಆರ್ ನಾರ್ಥ್ ಕವಾಯತು ಮೈದಾನದಲ್ಲಿ ಮಳೆ ನೀರು ಕೊಯ್ಲು ಅಂಗವಾಗಿ ಇಂಗು ಗುಂಡಿ ತೋಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮುಂದಿನ ಕೆಲವು ತಿಂಗಳುಗಳಲ್ಲಿ 200ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ಇತರೆ ಪೊಲೀಸ್ ಕಚೇರಿಗಳ ಆವರಣದಲ್ಲಿ ಮಾಡಲಾಗುತ್ತದೆ ಎಂದರು. ಪೊಲೀಸರು ಸಾರ್ವಜನಿಕರ ಸುರಕ್ಷತೆ, ರಕ್ಷಣೆ ಮತ್ತು ಶಾಂತಿ ಕಾಪಾಡುವುದರ ಜೊತೆಗೆ ಪರಿಸರದೊಂದಿಗೆ ಬದ್ದತೆ ತೋರಿಸುತ್ತಿರುವುದು ವಿಶೇಷ. ಸಾರ್ವಜನಿಕ ವಲಯದಲ್ಲೂ ಇದಕ್ಕೆ ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.
